ಕೂಡ್ಲಿಗಿ: ತ್ರೇತಾಯುಗದಲ್ಲಿ ಹನುಮಂತ ಶ್ರೀರಾಮನಿಗೆ ಅದಮ್ಯ ನಿಷ್ಠೆಯಾಗಿ ಸೇವೆ ಮಾಡುವ ಮೂಲಕ ರಾಮನೇ ಬೆರಗಾಗುವ ರೀತಿಯಲ್ಲಿ ಭಕ್ತಿಗೆ ಹೆಸರಾಗಿದ್ದಾನೆ. ಇಂತಹ ಶ್ರೇಷ್ಠ ಭಕ್ತ ಬೆಳದೇರಿ ಆಂಜನೇಯನ ಲೀಲೆ, ಪವಾಡಗಳ ಕುರಿತು ಉಜ್ಜಿನಿಯ ಪಲ್ಲವಿ ಆಡಿಯೋ ಮೊದಲ ಬಾರಿಗೆ ಧ್ವನಿಸುರುಳಿ ತಂದಿರುವುದು ಸಾರ್ಥಕ ಸೇವೆಯಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗರಾಜದೇಶಿಕೇಂದ್ರ ಭಗವತ್ಪಾದ ಸ್ವಾಮಿಗಳು ಬಣ್ಣಿಸಿದರು.
ಬೆಳದೇರಿ ಎಂದರೆ ತಕ್ಷಣ ನೆನಪಿಗೆ ಬರುವುದು ಆಂಜನೇಯ ಎಂದರು. ಭಕ್ತರ ಸಂಕಷ್ಟಗಳಿಗೆ ಈ ನೆಲದಲ್ಲಿ ಪರಿಹಾರ ಸಿಗುವುದರಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಈ ಊರಿನ ಗ್ರಾಮಸ್ಥರು ಸಹ ಧಾರ್ಮಿಕ ಕಾರ್ಯಗಳನ್ನು ಹಿಂದಿನಿಂದಲೂ ಅಚ್ಚುಕಟ್ಟಾಗಿ ನೆರವೇರಿಸುತ್ತಿರುವುದು ಸಂತಸ ತರುವ ಸಂಗತಿಯಾಗಿದೆ ಎಂದರು. ಗಂಡನ ಮನೆಗೆ ಹೋಗುವ ಮಹಿಳೆಯರು ಅಲ್ಲಿಯ ಸಂಬಂಧಗಳನ್ನು ಬೆಸೆಯುವ ಪರಸ್ಪರ ಹೊಂದಾಣಿಕೆ ಸಾಮರಸ್ಯದ ಬದುಕು ನಡೆಸುವ ಮೂಲಕ ಹುಟ್ಟಿದ ಮನೆಗೂ ಗಂಡನ ಮನೆಗೂ ಕೀರ್ತಿ ತರಬೇಕೆಂದು ನೆರೆದಿದ್ದ ಮಹಿಳೆಯರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪಲ್ಲವಿ ಆಡಿಯೋದ ಅಣಜಿ ಭೀಮಣ್ಣ, ಯುವ ಮುಖಂಡ ಬಣವಿಕಲ್ಲು ಯರ್ರಿಸ್ವಾಮಿ, ಸಾಹಿತಿಗಳಾದ ಭೀಮಣ್ಣ ಗಜಾಪುರ, ಸಂತೋಷ್ ಕುಮಾರ್ ಉಜ್ಜಿನಿ, ಕೂಡ್ಲಿಗಿಯ ಬಿ.ನಾಗರಾಜ, ಆಲೂರು ನಾರಾಯಣ ರೆಡ್ಡಿ, ಹುಡೇಂ ಕೖಷ್ಣಮೂರ್ತಿ, ದಯಾನಂದ ಸಜ್ಜನ್, ಕೆ.ಕರಿಬಸವರಾಜ, ಬೆಳದೇರಿ ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಸಡಗರ ಸಂಭ್ರಮದಿಂದ ಗ್ರಾಮಸ್ಥರು ನೆರವೇರಿಸಿದರು. ಸುತ್ತಮುತ್ತಲ ಭಕ್ತರು ಸಹ ಪಾಲ್ಗೊಂಡಿದ್ದರು. ಮಹಿಳೆಯರು ಆರತಿ ಬೆಳಗಿ ಉಜ್ಜಯಿನಿ ಜಗದ್ಗುರುಗಳನ್ನು ಗ್ರಾಮಕ್ಕೆ ಸ್ವಾಗತಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.