ಪಂಚನಹಳ್ಳಿ ಕ್ಲಸ್ಟರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನಾ ,ಶಾಲಾ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆವರೆಗೂ ಜತೆಗಿರುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಯ್ಯ ತಿಳಿಸಿದರು.
ತಾಲೂಕಿನ ಪಂಚನಹಳ್ಳಿ ಕ್ಲಸ್ಟರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗುರುವಂನೆ ಹಾಗೂ ವಾರ್ಷಿ ಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದಲ್ಲಿ ಗುರಿ ,ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.ನಾವು ಇಂದು ಉನ್ನತ ಶಿಕ್ಷಣ ಪಡೆದು, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ಕೂಲಿ, ಕಾರ್ಮಿಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಅಡಗಿದೆ. ಅವರು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಖರ್ಚು ಮಾಡುವ ಮೂಲಕ ಕಟ್ಟಿದ ತೆರಿಗೆ ಹಣದಿಂದಲೆ ನಾವು ಈ ಸ್ಥಾನಕ್ಕೇರಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ನಾವು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಾಸು ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿ ಋಣ ತೀರಿಸಲು ಸಾಧ್ಯ ಎಂದರು.ನಿವೃತ್ತ ಹಿರಿಯ ಶಿಕ್ಷಕ ರಾಜಯ್ಯ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಮುಂದುವರೆದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮದಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗೆ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ , ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮ. ಆ ಮೂಲಕ ಶಾಲೆ ಹಾಗೂ ಗ್ರಾಮದ ಅಭಿವೃದ್ಧಿ ಸಾಧಿಸಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಶಾಲಾ ಮುಖ್ಯಶಿಕ್ಷಕ ಸೋಮಶೇಖರಪ್ಪ ಮಾತನಾಡಿ, ಪಾಠ ಪ್ರವಚನಗಳಷ್ಟೇ ಅಲ್ಲ. ಕ್ರಿಯಾತ್ಮಕ ಚಟುವಟಿಕೆ ಗಳು ನಡೆದಾಗಲೇ ಶಾಲೆಯೊಂದು ಶೈಕ್ಷಣಿಕ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿಯಲ್ಲೂ ತನ್ನ ಪಾತ್ರ ವಿಸ್ತರಿಸಲು ಸಾಧ್ಯ ಎಂಬುದು ಈ ಮೂಲಕ ಸಾಬೀತಾಗಿದೆ. ಈ ಗ್ರಾಮದ ಎಲ್ಲಾ ಯುವಕರು, ಯುವತಿಯರು ಮುಖಂಡರು ಪಕ್ಷಾತೀತವಾಗಿ ಒಗ್ಗೂಡಿ ಯಶಸ್ಸುಗೊಳಿಸಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ.ಲಿಂಗರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶಿವಲಿಂಗಪ್ಪ, ಕುಮಾರಪ್ಪ, ಬಿ.ರಾಜು.ಗೀತಾಮಣಿ, ಗೌರಮ್ಮ, ಷನ್ಮುಖಪ್ಪ, ರಾಮಲಿಂಗಪ್ಪ, ಬಿ.ಎಚ್.ನಾಗರಾಜು, ಸೇರಿದಂತೆ ಮತ್ತಿತರನ್ನು ಗೌರವಿಸಲಾಯಿತು.
ಶಾಲಾ ಶಿಕ್ಷಕರಾದ ಕೆ.ಎಂ.ತಮ್ಮಯ್ಯ, ಬಿ.ಎಚ್.ಗಿರೀಶ್.ತಾಲೂಕು ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಪಿ.ಗೀತಾ, ಪಂಚನಹಳ್ಳಿ ಸಿ.ಆರ್.ಪಿ ರಾಜಪ್ಪ, ಗ್ರಾ.ಪಂ ಸದಸ್ಯರಾದ ನೇತ್ರಾವತಿ, ತಮ್ಮಯ್ಯ, ಉಮೇಶ್, ಎಸ್.ಡಿ.ಎಂ.ಸಿ ಸದಸ್ಯರಾದ ರಮೆಶ್, ರಾಮಚಂದ್ರಪ್ಪ, ಮೂರ್ತಿಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು.29 ಕಡೂರು 1ತಾಲ್ಲೂಕಿನ ಪಂಚನಹಳ್ಳಿ ಕ್ಲಸ್ಟರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುರುವಂದನಾ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಿರಿಯ ಶಿಕ್ಷಕ ರಾಜಯ್ಯ, ಹನುಮಯ್ಯ ಉದ್ಘಾಟಿಸಿದರು.