‘ವೀರಶೈವ ಪದ ಬಿಟ್ಟು ಲಿಂಗಾಯತ ಉಳಿಸಿಕೊಂಡು ಇದೊಂದೇ ಶೀರ್ಷಿಕೆಯಡಿ ಎಲ್ಲ ಒಳಪಂಡಗಳು ಒಗ್ಗಟ್ಟಾಗಬೇಕು : ಎಂ.ಬಿ.ಪಾಟೀಲ್‌

KannadaprabhaNewsNetwork | Updated : Feb 28 2025, 01:40 PM IST

ಸಾರಾಂಶ

‘ವೀರಶೈವ ಪದವನ್ನು ಬಿಟ್ಟು ಲಿಂಗಾಯತ ಮಾತ್ರ ಉಳಿಸಿಕೊಂಡು ಇದೊಂದೇ ಶೀರ್ಷಿಕೆಯಡಿ ಎಲ್ಲ ಒಳಪಂಡಗಳು ಒಗ್ಗಟ್ಟಾಗಬೇಕು ಎಂದು ಸಚಿವ ಎಂ.ಬಿ.ಪಾಟೀಲ್‌ ಅವರು ಹೇಳಿದ್ದಾರೆ.

 ಬೆಂಗಳೂರು : ‘ವೀರಶೈವ ಪದವನ್ನು ಬಿಟ್ಟು ಲಿಂಗಾಯತ ಮಾತ್ರ ಉಳಿಸಿಕೊಂಡು ಇದೊಂದೇ ಶೀರ್ಷಿಕೆಯಡಿ ಎಲ್ಲ ಒಳಪಂಡಗಳು ಒಗ್ಗಟ್ಟಾಗಬೇಕು. ವಚನಗಳನ್ನು ತಿರುಚಿ ತಪ್ಪು ಸಂದೇಶ ಕೊಡುವ ‘ವಚನ ದರ್ಶನ’ದಂತ ಕೃತಿಗೆ ಘನತೆಯಿಂದ ವಿರೋಧ ವ್ಯಕ್ತಪಡಿಸಿ ಸಮಾಜಕ್ಕೆ ಸತ್ಯಾಂಶ ತಿಳಿಸಬೇಕು’.

ಇದು ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಜಂಟಿಯಾಗಿ ಇಲ್ಲಿನ ಬಸವ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ವಚನ ದರ್ಶನ: ಸತ್ಯ v/s ಮಿಥ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಲಿಂಗಾಯತ ನಾಯಕರು ಹಾಗೂ ವಿವಿಧ ಮಠಾಧೀಶರ ಒಕ್ಕೂರಲ ಧ್ವನಿ.

ಕೃತಿ ಬಿಡುಗಡೆ ಮಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ, ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ರಾಜ್ಯದಲ್ಲಿ ಲಿಂಗಾಯತರನ್ನು ಒಡೆದು ಆಳುವ ಒಂದು ಅಜೆಂಡಾ ಕೆಲಸ ಮಾಡುತ್ತಿದೆ. ‘ವಚನ ದರ್ಶನ’ ಪುಸ್ತಕವು ಇದರ ಭಾಗ. ದಯವಿಟ್ಟು ನಮ್ಮ ಅಸ್ಮಿತೆಯ ಬಗ್ಗೆ ಕೈ ಹಾಕಬೇಡಿ. ನಿಮ್ಮ ಸಿದ್ಧಾಂತ ಪಾಲಿಸಿಕೊಂಡು ಹೋಗಿ. ವಚನ ಲಿಂಗಾಯತರಿಗೆ ಸೀಮಿತವಲ್ಲ. ಆದರೆ, ದುರುದ್ದೇಶದಿಂದ ವಚನಗಳ ಅರ್ಥ ತಿರುಚಿರುವುದನ್ನು ಸಹಿಸಲಾಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕಲಿಗರಲ್ಲಿ 104 ಉಪಪಂಗಡಗಳಿದ್ದರೂ ಅವರಲ್ಲಿ ಒಡಕಿಲ್ಲ. ಅಲ್ಲಿ ಒಬ್ಬರೇ ಸ್ವಾಮೀಜಿ ಮತ್ತು ಒಂದೇ ಅಧಿಕಾರ ಕೇಂದ್ರವಿದೆ. ಆದರೆ, ಲಿಂಗಾಯತರು ಉಪಪಂಗಡಗಳಲ್ಲಿ ಹಂಚಿಹೋಗಿದ್ದಾರೆ. 2 ಕೋಟಿ ಇರುವ ಲಿಂಗಾಯತರ ಸಂಖ್ಯೆ ಜಾತಿ ಗಣತಿಯಲ್ಲಿ 65 ಲಕ್ಷವಷ್ಟೆ ಇದೆ ಎಂದು ವರದಿಯಾಗಿದೆ. ಎಲ್ಲ ಲಿಂಗಾಯತರು ಒಂದೇ ಶೀರ್ಷಿಕೆಯಡಿ ಬರಬೇಕು.‌ ಆಗ ಮಾತ್ರ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದರು.

ಲಿಂಗಾಯತ ಆನ್‌ಲೈನ್‌ ಪತ್ರಿಕೆ ಬಿಡುಗಡೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯದಲ್ಲಿ ಲಿಂಗಾಯತರು ಒಂದಾಗಬೇಕು. ಒಳಪಂಗಡದ ಬಗ್ಗೆ ಮಾತನಾಡುವುದು ನಿಲ್ಲಬೇಕು. ನಾವೆಲ್ಲ ಒಂದು ಎಂಬ ಭಾವನೆ ಇರದಿರುವುದು ದುರ್ದೈವ. ನಾವು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ. ಎಲ್ಲರೂ ಒಂದಾದಲ್ಲಿ ರಾಜ್ಯ ಆಳುವ ದಿನಗಳು ಮುಂದೆ ಬರಲಿವೆ ಎಂದರು.‌

ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿ ರಚನೆಯಾಗಿ ಅಲ್ಲಿಂದ ತಳಮಟ್ಟದ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಆಗಬೇಕು. ಗಣತಿ ಬಂದಾಗ ಲಿಂಗಾಯತ ಎಂದೇ ಬರೆಸಬೇಕು. ಹಲವು ಕಾರಣದಿಂದ ಲಿಂಗಾಯತರಿಗೆ ಆಗುವ ಅನ್ಯಾಯ ನಿಲ್ಲಲಿದೆ ಎಂದರು. ಸಮಾಜ ಒಗ್ಗಟ್ಟಾಗುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿಚಾಚಾರ್ಯ ಸ್ವಾಮೀಜಿ, ನಾವು ಸಂಘಟಿತರಾದಲ್ಲಿ ಪುನಃ ನಾವು ಲಿಂಗಾಯತ ಧರ್ಮಕ್ಕಾಗಿ ಹೋರಾಡುವ ಅಗತ್ಯ ಬರುವುದಿಲ್ಲ. ಅದು ತಾನಾಗಿ‌ ಬರಲಿದೆ. ವೇದ ಉಪನಿಷತ್ ನಮಗೆ ಸಂಬಂಧ ಪಟ್ಟವಲ್ಲ, ವಚನ ಸಾಹಿತ್ಯವೇ ನಮ್ಮ ಗ್ರಂಥ ಎಂಬುದನ್ನು ಅರಿಯಬೇಕು. ಹೊಸ ಪೀಳಿಗೆ ವಚನ ಅರ್ಥ ಮಾಡಿಕೊಳ್ಳಲು ಕನ್ನಡ ಬೇಕು. ಅದಕ್ಕೆ ಆಂಗ್ಲ ವ್ಯಾಮೋಹ ಬಿಟ್ಟು ಮಕ್ಕಳಿಗೆ ಕನ್ನಡ ಕಲಿಸಿ ಎಂದು ಕರೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ಜಂಗಮರಿಂದ ಮಾದರವರೆಗೆ ನಾವೆಲ್ಲ ಒಂದಾದರೆ ನಾವು ಕೇಳಿದ ಮೀಸಲಾತಿಯನ್ನು ಕೇಂದ್ರ ಕೊಡಲಿದೆ. ಮುಂದಿನ 4 ವರ್ಷಗಳಲ್ಲಿ ಎಲ್ಲ ಮಠ, ಸಂಘ ಸಂಸ್ಥೆಗಳು ಒಂದೇ ಷಟ್‌ಸ್ಥಳ ಧ್ವಜದಡಿ ಲಿಂಗಾಯತ ಸಂಸ್ಥೆಗಳನ್ನು ಒಗ್ಗೂಡಿಸೋಣ. ಶ್ಯಾಮನೂರು ಶಿವಶಂಕರಪ್ಪ ಅವರ ಸಮಕ್ಷಮದಲ್ಲಿ ನಾವೆಲ್ಲ ಪುನಃ ಒಂದಾಗೋಣ ಎಂದರು.

ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ‘ವಚನ ದರ್ಶನ’ ಕೃತಿ ವರ್ಗಭೇದ, ಲಿಂಗಭೇದ ಇರುವಂತ‌ ಸಮಾಜ ನಿರ್ಮಿಸುವ ಉದ್ದೇಶ ಹೊಂದಿದೆ. ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಹತ್ತಿಕ್ಕಿ ಮೂಢನಂಬಿಕೆ ಬಿತ್ತುತ್ತಿದೆ. ವೀರಶೈವ ಪದ ಹೋದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂಬ ಕಾರಣದಿಂದ ಹಲವರು ‘ಲಿಂಗಾಯತ’ವನ್ನು ಮಾತ್ರ ಉಳಿಸಿಕೊಳ್ಳಲು ವಿರೋಧ ಮಾಡುತ್ತಿದ್ದಾರೆ. ‘ವೀರಶೈವ’ ಪದ ಬಿಟ್ಟು ನಾವು ‘ಲಿಂಗಾಯತ’ವನ್ನು ಮಾತ್ರ ಉಳಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ಸಾಹಿತ್ಯಕ್ಕೂ ಸಮಾಜಕ್ಕೂ ನಿಕಟ ಸಂಬಂಧ ಕಲ್ಪಿಸಿದ್ದು ವಚನ ಸಾಹಿತ್ಯ. ಕಲುಷಿತ ‘ವಚನ ದರ್ಶನ’ ಕೃತಿಗೆ ಇದು ಉತ್ತರ ನೀಡುತ್ತಿದೆ. ಸಂಸ್ಕೃತ ಮೋಸಗೊಳಿಸುವ ಭಾಷೆ.‌ ಅರ್ಥ ಮಾಡಿಕೊಳ್ಳುವ ಭಾಷೆ ಕನ್ನಡ. ಕೆಲವೇ ವರ್ಷಗಳಲ್ಲಿ ‘ವೀರಶೈವ’ ಎಂಬ ಶಬ್ದ ಹೋಗಿ ಲಿಂಗಾಯತ ಮಾತ್ರ ಉಳಿಯಲಿ ಎಂಬುದು ನಮ್ಮ ಬಯಕೆ ಎಂದರು.

ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ವೀರಶೈವ ಪದ ಇಟ್ಟುಕೊಂಡು ಹೋದರೆ‌ ಸಾವಿರ‌ ವರ್ಷ ಹೋದರೂ ಧರ್ಮದ ಮಾನ್ಯತೆ ಸಿಗಲು ಸಾದ್ಯವಿಲ್ಲ. ಹೀಗಾಗಿ ಬಿದರಿ ಅವರ ಮಹಾಸಭಾ ಕೂಡ ‘ಲಿಂಗಾಯತ’ಕ್ಕಾಗಿ ಒಂದು ಹೆಜ್ಜೆ ಮುಂದಿಡಬೇಕು. ಎಲ್ಲಾ ಉಪ ಪಂಗಡಗಳು ಒಂದಾದರೆ ಎಲ್ಲರಿಗೂ ಮೀಸಲಾತಿ ಸಿಗಲಿದೆ ಎಂದರು.

ಈ ವೇಳೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಮಾದಾರ್, ಲೇಖಕ ಟಿ.ಆರ್. ಚಂದ್ರಶೇಖರ್, ಬೇಲಿಮಠದ ಶಿವರುದ್ರ ಸ್ವಾಮೀಜಿ, ಬಸವ ಧರ್ಮಪೀಠದ ಡಾ.ಗಂಗಾಮಾತಾಜಿ ಹಾಜರಿದ್ದರು.

Share this article