- ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಃ ಸಡಗರ ಸಂಭ್ರಮದಿಂದ ಉದ್ಗಾಟನೆ
ಕನ್ನಡಪ್ರಭ ವಾರ್ತೆ, ತರೀಕೆರೆ (ಶ್ರೀಮತಿ ಎಂ.ಕೆ.ಇಂದಿರಾ ವೇದಿಕೆ)ಭಾಷೆಯನ್ನು ಬಳಸಿದಾಗ ಮಾತ್ರ ಶ್ರೀಮಂತವಾಗುತ್ತದೆ. ಹೃದಯ ಶ್ರೀಮಂತಿಕೆಯಿಂದ ಮಾತ್ರ ಈ ಕೆಲಸ ಸಾಧ್ಯ, ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು. ಮುಖ್ಯವಾಗಿ ಕನ್ನಡ ಭಾಷೆ ಮನೆ ಮತ್ತು ಅನ್ನ ಕೊಡುವ ಭಾಷೆಯಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಅಭಿಪ್ರಾಯಪಟ್ಟರು.
ಜಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ 20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಮ್ಮೇಳನಗಳು ಅಬ್ಬರ ಆಡಂಬರಗಳಿಗೆ ಆದ್ಯತೆ ನೀಡದೆ ಅರ್ಥಪೂರ್ಣವಾಗಿ ಭಾಷೆ ಕಟ್ಟುವ, ಜಾಗೃತಿ ಮೂಡಿಸುವ, ನಾಡಿನ ಇತಿಹಾಸ, ಪರಂಪರೆ ಕಲೆ, ಸಾಹಿತ್ಯ ಸಂಸ್ಕೃತಿ ಬಗ್ಗೆ ಬೆಳಕು ಚೆಲ್ಲುವ ಗೋಷ್ಠಿಗಳು ನಡೆಯಬೇಕು ಎಂದು ಪ್ರತಿಪಾದಿಸಿದರು.ಸರ್ಕಾರ ಶಿಕ್ಷಣಕ್ಕಾಗಿ ಆಯವ್ಯಯದಲ್ಲಿ ಕೋಟಿ ಕೋಟಿ ಹಣ ವ್ಯಯಿಸಿದರೂ ಪ್ರಯೋಜನವಾಗುತ್ತಿಲ್ಲ. ಕನ್ನಡ ಮಾದ್ಯಮ ಸರ್ಕಾರಿ ಶಾಲೆಗಳನ್ನು ನೋಡಿದರೆ ಮರುಕ ಉಂಟಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಎಂದು ಇನ್ನೊಂದು ಶಾಲೆಯೊಂದಿಗೆ ಸೇರ್ಪಡೆ ಅಥವಾ ಮುಚ್ಚುವುದು ನಿಲ್ಲಬೇಕು ಎಂದು ಆಗ್ರಹಿಸಿದರು.
ಸರ್ಕಾರ ಅದ್ಯತೆ ಮೇರೆಗೆ ಶಾಲೆಗಳಿಗೆ ಮೂಲಭೂತ ಸೌಕರ್ಯ, ಸಾಕಷ್ಟು ಶಿಕ್ಷಕರನ್ನು ನೇಮಿಸಬೇಕು. ಮಕ್ಕಳಿಗೆ ಬಿಸಿಯೂಟ, ಸೈಕಲ್ ಸಮವಸ್ತ್ರ ಇತರೆ ಸೌಲಭ್ಯ ನೀಡುತ್ತಿರುವುದು ಸ್ತುತ್ಯಾರ್ಹವಾದರೂ ಅಷ್ಟೇ ಪ್ರಾಮುಖ್ಯತೆಯನ್ನು ಬೋಧನೆಗೂ ನೀಡುವಂತಾಗಬೇಕು. ನಗರ ಪ್ರದೇಶಗಳು ಅನ್ಯ ರಾಜ್ಯದ ಅನ್ಯ ಭಾಷಿಕರಿಂದ ತುಂಬಿ ತುಳುಕುತ್ತಿವೆ. ಕನ್ನಡಿಗರೆ ಪರಕೀಯರಂತಿರುವ ಪರಿಸ್ಥಿತಿ ಇದೆ, ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಶಿಕ್ಷಣ ಇಂದು ಅಗತ್ಯ ಎಂದು ಅಬಿಪ್ರಾಯ ಪಟ್ಟರು.ಪುಸ್ತಕ ಕೊಳ್ಳುವ, ಓದುವ ಮತ್ತು ಬರೆಯುವ ಅಭ್ಯಾಸವನ್ನು ಮಕ್ಕಳಲ್ಲಿ ಮೂಡಿಸಬೇಕು. ಮಕ್ಕಳ ಆಟ ಪಾಠಗಳಲ್ಲಿ ಅಸಕ್ತಿ ಕಡಿಮೆಯಾಗುತ್ತಿದೆ. ಪ್ರಸ್ತುತ ಬದಲಾವಣೆ ಮತ್ತು ಕಣ್ಮರೆಯಾಗುತ್ತಿರುವ ಸಂಪ್ರದಾಯಗಳು, ಕಲೆ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಪದ್ಧತಿಗಳನ್ನು ದಾಖಲಿಸಬೇಕು. ಇದರ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಕ್ರಮಿಸಿದಲ್ಲಿ ಸಾರ್ಥಕ ವಾದೀತು ಎಂದು ಆಶಿಸಿದರು.
ಚಿಕ್ಕಮಗಳೂರು ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕನ್ನಡದ ರಥವನ್ನು ಹಳ್ಳಿ, ಹೋಬಳಿಗಳಲ್ಲಿ ಪಟ್ಟಣದಲ್ಲಿ ಎಳೆದರು. ಸಮ್ಮೇಳನ ಮಾಡಲು ತ್ಯಾಗ ಬೇಕು, ದಾನಿಗಳು ಸಹಕರಿಸಿದ್ದಾರೆ, ಕನ್ನಡ ಬೆಳೆಯಬೇಕು ಎಂದು ನುಡಿದರು.ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ ನಾವು ವಿಶೇಷ ತಂತ್ರಜ್ಞಾನ ಯುಗಕ್ಕೆ ಹೋಗಿದ್ದೇವೆ. ಆದರೆ ಭಾಷೆ, ನೆಲ, ಜಲ ಬಹಳ ವಿಶೇಷವಾದುದು. ನಮ್ಮ ಭಾಷೆಯನ್ನುನಾವು ಆರಾಧಿಸೋಣ, ಕನ್ನಡ ಬೆಳೆಸಬೇಕು, ನಾಡು ನುಡಿ ಬಗ್ಗೆ ಅಭಿಮಾನ ಹೊಂದಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಅಚ್ಚುಕಟ್ಟು, ಬಹಳ ಅದ್ಧೂರಿಯಾಗಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆದಿದೆ. ಕನ್ನಡ ಕಟ್ಟುವ ಕೆಲಸ ಆಗುತ್ತಿದೆ. ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ನಡೆಯುತ್ತಿವೆ. ಅಚ್ಚುಕಟ್ಟಾಗಿ ಸಮ್ಮೇಳನ ಸಂಘಟಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಸಂಸ್ಕೃತಿ ಚಿಂತಕ ಭರತ್ ಅಂಚೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್, ಎ,ಸಿ.ಚಂದ್ರಪ್ಪ ಮತ್ತಿತರರು ಮಾತನಾಡಿದರು.
ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಸದಸ್ಯ ಬಿ.ಎಸ್.ಭಗವಾನ್, ನವೀನ್ ಪೆನ್ನಯ್ಯ, ಲೇಖಕ ತ.ಮ. ದೇವಾನಂದ್, ಮಿಲ್ಟ್ರಿ ಶ್ರೀನಿವಾಸ್, ಎಂ.ನರೇಂದ್ರ, ಟಿ.ಜಿ.ಮಂಜುಲಾಥ್, ಇಮ್ರಾನ್ ಅಹಮದ್ ಬೇಗ್, ಮುಹೀಬುಲ್ಲಾ, ಚೇತನಗೌಡ, ಎಚ್. ವಿಶ್ವನಾಥ್, ಪವನ್ ಕುಮಾರ್, ವೆಂಕಟೇಶ್, ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.7ಕೆಟಿಆರ್.ಕೆ.3ಃತರೀಕೆರೆಯಲ್ಲಿ ನಡೆದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಕ್ಕಮಗಳೂರು ಡಾ.ಜೆ.ಪಿ. ಕೃಷ್ಣೇಗೌಡ ದ ಉದ್ಘಾಟಿಸಿದರು. ಸಮ್ಮೇಳಾಧ್ಯಕ್ಷ ಡಾ.ಎಚ್.ಎಂ,ಮರುಳಸಿದ್ದಯ್ಯ ಪಟೇಲ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾ. ಕಸಾಪ ಅಧ್ಯಕ್ಷ ರವಿ ದಳವಾಯಿ, ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್, ಮತ್ತಿತರರು ಇದ್ದರು.
-----------------------