ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ನೋಂದಣಿ ಕೇಂದ್ರ ತೆರೆಯಿರಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

KannadaprabhaNewsNetwork | Published : Nov 13, 2024 12:05 AM

ಸಾರಾಂಶ

ಕನಿಷ್ಠ ಬೆಂಬಲ ಬೆಲ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಲ್ ₹2300 ಮತ್ತು ಗ್ರೇಡ್ಎ ಭತ್ತಕ್ಕೆ ₹2320 ನಿಗದಿಪಡಿಸಲಾಗಿದೆ.

ಕಾರವಾರ: ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲ ಯೋಜನೆಯಲ್ಲಿ ಜಿಲ್ಲೆಯ ರೈತರಿಂದ ಭತ್ತ ಖರೀದಿ ಮಾಡುವ ಕುರಿತಂತೆ, ನೋಂದಣಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರವು ಪ್ರಸಕ್ತ ಸಾಲಿಗೆ ಕನಿಷ್ಠ ಬೆಂಬಲ ಬೆಲ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಲ್ ₹2300 ಮತ್ತು ಗ್ರೇಡ್ಎ ಭತ್ತಕ್ಕೆ ₹2320 ನಿಗದಿಪಡಿಸಿದ್ದು, ಈ ಕುರಿತಂತೆ ಜಿಲ್ಲೆಯ ರೈತರಿಂದ ಭತ್ತ ಖರೀದಿಸಲು ಅನುಕೂಲವಾಗುವಂತೆ ಹಳಿಯಾಳ, ಶಿರಸಿ, ಮುಂಡಗೋಡ, ಜೋಯಿಡಾ, ಕುಮಟಾ, ಅಂಕೋಲಾ ಮತ್ತು ಭಟ್ಕಳದಲ್ಲಿ ನೋಂದಣಿ ಕೇಂದ್ರಗಳನ್ನು ತೆರೆದು ನ. 15ರಿಂದ ರೈತರ ನೋಂದಣಿಯನ್ನು ಆರಂಭಿಸುವಂತೆ ಸೂಚಿಸಿದರು.ಭತ್ತ ಖರೀದಿಗೆ ಸಂಬಂಧಿಸಿದಂತೆ ಸರ್ಕಾರದಿಂದ ನೇಮಕಗೊಂಡ ಸಂಗ್ರಹಣಾ ಏಜೆನ್ಸಿಗಳು ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಭತ್ತ ಖರೀದಿ ಹಂತದಲ್ಲಿ ಎಫ್‌ಎಕ್ಯು ಗುಣಮಟ್ಟವನ್ನು ದೃಢೀಕರಿಸಲು, ಪ್ರತಿ ಖರೀದಿ ಕೇಂದ್ರದಲ್ಲಿ ಕೃಷಿ ಇಲಾಖೆಯ ವತಿಯಿಂದ ಗ್ರೇಡರ್‌ಗಳನ್ನು ನೇಮಿಸಿಕೊಳ್ಳಬೇಕು ಎಂದರು.

ಪ್ರತಿ ಕೇಂದ್ರಗಳಿಗೆ ಖರೀದಿ ಅಧಿಕಾರಿಗಳನ್ನು ನೇಮಿಸಬೇಕು. ರೈತರಿಂದ ಖರೀದಿಸಿದ ಭತ್ತ ಸಂಗ್ರಹಣೆಗೆ ಗೋದಾಮುಗಳ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಮತ್ತು ಖರೀದಿ ಕೇಂದ್ರಗಳಿಗೆ ಆಗಮಿಸುವ ರೈತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 15 ದಿನಗಳ ಒಳಗೆ ಅವರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಬೇಕು. ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ, ಭತ್ತ ಖರೀದಿಗಾಗಿ ರೈತರಿಗಾಗಿ ಜಿಲ್ಲೆಯಲ್ಲಿ ತೆರೆಯಲಾಗುವ ನೋಂದಣಿ ಕೇಂದ್ರಗಳು ಮತ್ತು ಖರೀದಿ ಕೇಂದ್ರಗಳ ಬಗ್ಗೆ ಜಿಲ್ಲೆಯ ಎಲ್ಲ ರೈತರಿಗೆ ಅಗತ್ಯ ಮಾಹಿತಿಯನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ, ವಿವಿಧ ಇಲಾಖೆಯ ಅಧಿಕಾರಿಗಳು, ಗಿರಣಿ ಮಾಲೀಕರು ಇದ್ದರು.

Share this article