ಯಲ್ಲಾಪುರ: ನಮಗೆ ಇಚ್ಛೆ ಉಂಟಾದಾಗ ಭಾವ ಹುಟ್ಟುತ್ತದೆ. ಅದು ಹೆಚ್ಚಾದಂತೆ ದೃಢವಾದ ಇಚ್ಛೆ ಬೆಳೆದಂತೆ ಸಂಕಲ್ಪವಾಗಿ ರೂಪುಗೊಳ್ಳುತ್ತದೆ. ದೃಢವಾದ ಸಂಕಲ್ಪದಿಂದ ಸಿದ್ಧಿಯಾಗುತ್ತದೆ. ಸಂಕಲ್ಪ ಪ್ರತಿಯೊಂದಕ್ಕೂ ಬೇಕು. ಎಲ್ಲದಕ್ಕೂ ಮನಸ್ಸೇ ಮಹತ್ವ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.
ದೇಶದಲ್ಲಿ ಮೊಘಲರು, ಬ್ರಿಟಿಷರು ಸೇರಿದಂತೆ ಅನೇಕರು ಮಂದಿರಗಳನ್ನು ಧ್ವಂಸ ಮಾಡಿದ ಇತಿಹಾಸವಿದೆ. ಆದರೆ ಆದಿಶಂಕರಾಚಾರ್ಯರು ಸ್ಥಾಪಿಸಿದ ಮಠಗಳನ್ನು ಯಾರಿಂದಲೂ ಏನೂ ಮಾಡಲಾಗಿಲ್ಲ. ಕಲೆಗೆ ಭಾವ ಇದೆ, ಕಲ್ಲಿಗೆ ಭಾವವಿಲ್ಲ, ಪಶು-ಪಕ್ಷಿಗಳಿಗೆ ಸ್ವಲ್ಪ ಕಡಿಮೆ. ಭಾವಾಭಿರಸಯುಕ್ತವಾದ ವಿಷಯಗಳೇ ಕಾವ್ಯ. ಜೀವನದಲ್ಲಿ ಬರುವ ಕಷ್ಟ, ದುಃಖಗಳನ್ನು ಇಂತಹ ಕಲೆ ಹೋಗಲಾಡಿಸುತ್ತದೆ. ಆರೋಗ್ಯಪೂರ್ಣ ಮನಸ್ಸನ್ನು ಉಂಟುಮಾಡುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕೆನರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಮಾತನಾಡಿ, ಸಮಾಜದಲ್ಲಿಂದು ವೇದಿಕೆಯಲ್ಲಿ ನಾವು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎನ್ನುತ್ತೇವೆ. ಅವು ನಮ್ಮ ಆಚರಣೆಯಲ್ಲಿ ಯಾವುದೂ ಇರುವುದಿಲ್ಲ. ಆದರೆ ರಾಜಕೀಯರಹಿತವಾಗಿ ಸಂಕಲ್ಪ ಉತ್ಸವ ಪರಂಪರೆಯನ್ನು ಉಳಿಸಿಕೊಂಡು ಹೋಗುವುದಕ್ಕೆ ಪ್ರಮೋದ ಹೆಗಡೆ ಕುಟುಂಬ ಮಹತ್ವದ ಕೊಡುಗೆ ನೀಡಿದೆ ಎಂದರು.ಕಾರವಾರದ ಹಿರಿಯ ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ಸಂಕಲ್ಪದ ಪ್ರೇರಣೆಯಿಂದಾಗಿ ನಾನು ಕಾರವಾರದಲ್ಲಿ ಜ್ಞಾನಸತ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಯತ್ನಿಸುತ್ತಿದ್ದೇನೆ. ಅಷ್ಟೊಂದು ಸಂಕಲ್ಪದ ಶಕ್ತಿ ಜಿಲ್ಲೆ, ರಾಜ್ಯದಲ್ಲಿ ಪ್ರಭಾವ ಬೀರಿದೆ ಎಂದರು.
ಶಿರಸಿ ಟಿಎಸ್ಎಸ್ ಆಸ್ಪತ್ರೆಯ ವೈದ್ಯರಾದ ಡಾ. ಜ್ಞಾನಪ್ರಕಾಶ ಕಾರಂತ, ಸಾಗರದ ಡಾ. ಸುಮಂತ ಬಳಗಂಡಿ, ಯಲ್ಲಾಪುರದ ಡಾ. ವಿಶಾಲ ಪಂಡಿತ ಹಾಗೂ ಕೃಷಿ ಸಾಧಕ ತನ್ಮಯ ಹೆಗಡೆ ಶಾನವಳ್ಳಿ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.