ಹುಬ್ಬಳ್ಳಿ:
ಮಾರುಕಟ್ಟೆ ಪ್ರದೇಶ, ಪ್ರಮುಖ ರಸ್ತೆ ಅಕ್ಕ-ಪಕ್ಕ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿರುವ ಡಬ್ಬಾ ಅಂಗಡಿ ತೆರವುಗೊಳಿಸಲಾಗಿದೆ. ಈ ವೇಳೆ ಕೆಲವೆಡೆ ವಿರೋಧವೂ ವ್ಯಕ್ತವಾಗಿದೆ. ಆದರೆ ಪೊಲೀಸರ ನೆರವಿನೊಂದಿಗೆ 12 ವಲಯಗಳಲ್ಲೂ ಆಪರೇಷನ್ ಫುಟ್‌ಪಾತ್ ನಡೆದಿದೆ.
ಕಳೆದ ತಿಂಗಳು ನಡೆದಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಫುಟ್‌ಪಾತ್ ಅತಿಕ್ರಮಣದಿಂದಾಗಿ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅತಿಕ್ರಮಣ ತೆರವುಗೊಳಿಸಬೇಕೆಂದು ಸರ್ವ ಸದಸ್ಯರು ಒತ್ತಾಯಿಸಿದ್ದರು. ಬಳಿಕ ಪುಟ್‌ಪಾತ್ ತೆರವಿಗೆ ಠರಾವು ಪಾಸ್ ಮಾಡಲಾಗಿತ್ತು.ಅದರಂತೆ ಶನಿವಾರ ಬೆಳಗ್ಗೆ 6ರಿಂದ 12 ವಲಯಗಳಲ್ಲಿ ಫುಟ್‌ಪಾತ್ ಕಾರ್ಯಾಚರಣೆ ನಡೆಸಲಾಯಿತು. ಕೊಪ್ಪಿಕರ್ ರಸ್ತೆ, ಗೋಕುಲ ರಸ್ತೆ, ಬ್ರಾಡವೇ, ಮರಾಠಗಲ್ಲಿ, ದುರ್ಗದ ಬೈಲ್, ಶಹಾ ಬಜಾರ, ಸಿಬಿಟಿ, ನವನಗರ, ಧಾರವಾಡ, ಸತ್ತೂರ ಸೇರಿದಂತೆ 12 ವಲಯ ಕಚೇರಿ ವ್ಯಾಪ್ತಿಗಳಲ್ಲೂ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.
ಗೋಕುಲ ರಸ್ತೆಯ ಬನ್ನಿಗಿಡ ಸ್ಟಾಪ್‌ನಿಂದ ಅಕ್ಷಯ ಪಾರ್ಕ್ ವೃತ್ತದ ವರೆಗೂ ಕಾರ್ಯಾಚರಣೆ ನಡೆಸಿ, ಎಳನೀರು, ಐಸ್‌ಕ್ರೀಮ್, ತಂಪು ಪಾನೀಯ, ಚಾಟ್ ಮಸಾಲ ಮತ್ತು ಬೇಲ್ ಪುರಿ, ಪಾನಿ ಪುರಿ ಅಂಗಡಿ ತೆರವು ಮಾಡಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ದಿನ 263ಕ್ಕೂ ಹೆಚ್ಚು ಡಬ್ಬಾ ಅಂಗಡಿ, ಕೆಲ ಅಕ್ರಮ ಮಳಿಗೆ ತೆರವು ಮಾಡಲಾಗಿದೆ.
ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದುದರಿಂದ ಸಂಚಾರ ದಟ್ಟಣೆ ಜತೆಗೆ, ಪಾದಚಾರಿಗಳು ಸಂಚರಿಸಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆ ಆಪರೇಷನ್ ಪುಟ್‌ಪಾತ್ ಕಾರ್ಯಾಚರಣೆಯಡಿ ಏಕಕಾಲಕ್ಕೆ 12 ವಲಯ ಕಚೇರಿಯಲ್ಲಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಸಹಕಾರದಿಂದ 263ಕ್ಕೂ ಹೆಚ್ಚು ಡಬ್ಬಾ ಅಂಗಡಿ ತೆರವು ಮಾಡಿ, ಪಾದಚಾರಿ ಮಾರ್ಗ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು. ಆಪರೇಷನ್ ಪುಟ್‌ಪಾತ್ ಅಡಿ ಮುಂದಿನ ನಾಲ್ಕು ತಿಂಗಳು ಪ್ರತಿ ವಾರ ತೆರವು ಕಾರ್ಯಾಚರಣೆ ಮಾಡಲಾಗುವುದು.