ಶಿರೂರು ಗುಡ್ಡು ಕುಸಿತ: ಇಂದು ಆಪರೇಷನ್‌ ಲಾರಿ ಆರಂಭ

KannadaprabhaNewsNetwork | Published : Jul 25, 2024 1:20 AM

ಸಾರಾಂಶ

ಶಿರೂರಿನಲ್ಲಿ ಗುಡ್ಡ ಕುಸಿತ ಕಾರ್ಯಾಚರಣೆ ಬುಧವಾರ 9ನೇ ದಿನಕ್ಕೆ ಕಾಲಿರಿಸಿದ್ದು, ನಾಪತ್ತೆಯಾಗಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ, ದುರಂತದಲ್ಲಿ ಕಣ್ಮರೆಯಾದ ಲಾರಿ ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡ ಮಣ್ಣಿನಡಿ ಹುದುಗಿರುವುದು ಖಚಿತವಾಗಿದೆ.

ಕನ್ನಡಪ್ರಭ ವಾರ್ತೆ ಅಂಕೋಲಾ

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ಕಾರ್ಯಾಚರಣೆ ಬುಧವಾರ 9ನೇ ದಿನಕ್ಕೆ ಕಾಲಿರಿಸಿದ್ದು, ನಾಪತ್ತೆಯಾಗಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ, ದುರಂತದಲ್ಲಿ ಕಣ್ಮರೆಯಾದ ಲಾರಿ ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡ ಮಣ್ಣಿನಡಿ ಹುದುಗಿರುವುದು ಖಚಿತವಾಗಿದೆ.

ಕಣ್ಮರೆಯಾದ ಲಾರಿಯಲ್ಲಿದ್ದ ಕಟ್ಟಿಗೆ ತುಂಡುಗಳಲ್ಲಿ 32 ಸಾಗುವಾನಿಯ ತುಂಡುಗಳು ಅಗ್ರಗೋಣ ಬಳಿಯ ಸಮುದ್ರದಲ್ಲಿ ಪತ್ತೆಯಾಗಿವೆ. ಹೀಗಾಗಿ ಲಾರಿ ಗಂಗಾವಳಿ ನದಿಯಲ್ಲಿ ಮುಳುಗಿರುವುದು ಸ್ಪಷ್ಟವಾಗಿದೆ. ಇನ್ನು, ದುರಂತ ಸಮಯದಲ್ಲಿ ಲಾರಿಯ ಕ್ಯಾಬಿನ್‌ನಲ್ಲಿ ಚಾಲಕ ಅರ್ಜುನ್ ಮಲಗಿದ್ದ. ದುರಂತಕ್ಕೆ ಮುನ್ನ ಲಾರಿ ಅಂಕೋಲಾದಿಂದ ಶಿರೂರಿನತ್ತ ತೆರಳಿರುವುದು ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ.

ಈ ಮಧ್ಯೆ, ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಸ್ಯಾಟ್‌ಲೈಟ್ ಚಿತ್ರ, ಸೇನಾಪಡೆ, ನೌಕಾಪಡೆ ಸೇರಿ ಮೂರು ವಿಭಾಗದ ತಂತ್ರಜ್ಞಾನದ ಕಾರ್ಯಾಚರಣೆಯಲ್ಲೂ ಗಂಗಾವಳಿ ನದಿಯಲ್ಲಿ ಟ್ರಕ್‌ನಂತಹ ವಸ್ತು ಇರುವುದು ಪತ್ತೆಯಾಗಿದೆ. ಗಂಗಾವಳಿ ನದಿಯ ಒಂದು ನಿರ್ದಿಷ್ಟ ಪಾಯಿಂಟ್‌ನಲ್ಲಿ ಟ್ರಕ್‌ನಂತಹ ವಸ್ತು ಇರುವುದು ಪತ್ತೆಯಾಗಿದೆ. ಆದರೆ, ಈ ಪಾಯಿಂಟ್‌ನಲ್ಲಿ ನೌಕಾನೆಲೆಯ ಡೈವರ್ಸ್ ಮುಳುಗಿ ಪತ್ತೆಹಚ್ಚಲು ನೀರಿನ ವೇಗ ಅಡ್ಡಿ ಉಂಟುಮಾಡಿದೆ. ಗುರುವಾರ ನೀರಿನ ಹರಿವು, ಹವಾಮಾನ ಉತ್ತಮವಾಗಿದ್ದಲ್ಲಿ ನೌಕಾನೆಲೆ ಡೈವರ್ಸ್ ಮುಳುಗಿ ಪತ್ತೆ ಹಚ್ಚಲಿದ್ದಾರೆ. ಜತೆಗೆ, ಖಾಸಗಿ ಏಜೆನ್ಸಿ ಕೂಡ ಸ್ಯಾಟ್‌ಲೈಟ್ ಮೂಲಕ ನಿಖರ ಸ್ಥಳವನ್ನು ಪತ್ತೆ ಹಚ್ಚಲಿದೆ ಎಂದು ತಿಳಿಸಿದರು.

ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ, ಉಪ ವಿಭಾಗಾಧಿಕಾರಿ ಅಥವಾ ತಹಸೀಲ್ದಾರ್ ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಉದ್ಯೋಗ ಒದಗಿಸಲಾಗುವುದು ಎಂದು ಅವರು ತಿಳಿಸಿದರು.ಕಾರ್ಯಾಚರಣೆಗೆ ಬೂಮ್‌ ಯಂತ್ರ ಬಳಕೆ:

ಈ ಮಧ್ಯೆ, ದುರಂತದ ವೇಳೆ ಒಟ್ಟೂ 10 ಮಂದಿ ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿದ್ದು, ಈ ಪೈಕಿ 7 ಮಂದಿಯ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಕಣ್ಮರೆಯಾದವರ ಶೋಧಕ್ಕಾಗಿ ಬುಧವಾರದಿಂದ ಸುಮಾರು 60 ಅಡಿ ಉದ್ದ ಹಾಗೂ 30 ಅಡಿ ಆಳದ ಮಣ್ಣು ತೆರವು ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಬೂಮ್ ಹಿಟಾಚಿ ಯಂತ್ರ ಬಳಸಿ, ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ಗುಡ್ಡದ ಮಣ್ಣಿನ ರಾಶಿ ತೆರವು ಕಾರ್ಯಾಚರಣೆಗೆ ಕಳೆದ 9 ದಿನಗಳಿಂದ ಸತತ ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ಗಂಗಾವಳಿ ನದಿ ದಂಡೆಯಿಂದ ಸುಮಾರು 130 ಅಡಿಗಳಷ್ಟು ಉದ್ದ ಹಾಗೂ 300 ಅಡಿಗಳಷ್ಟು ವಿಶಾಲವಾಗಿ ಹರಡಿಕೊಂಡಿರುವ ಮಣ್ಣಿನ ರಾಶಿಯಲ್ಲಿ ತುಂಬಿಕೊಂಡಿರುವ ಕಲ್ಲು ಬಂಡೆಗಳು ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ.

ಹುದುಗಿಕೊಂಡಿರುವ ಬೆಂಜ್ ಲಾರಿಯನ್ನು ರೆಡಾರ್ ಬಳಸಿ ಶೋಧ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಒಣಮಣ್ಣಿನಲ್ಲಿ ಶೋಧ ಕಾರ್ಯದ ವರದಿಯನ್ನು ಮಾತ್ರವೇ ನೀಡುವ ರೆಡಾರ್‌, ತೇವಾಂಶವಿರುವ ಮಣ್ಣಿನಲ್ಲಿರುವ ಮಾಹಿತಿ ಒದಗಿಸುತ್ತಿಲ್ಲ. ಈ ನಡುವೆ, ಮೃತ ದೇಹಗಳ ಪತ್ತೆಗೆ ಬುಧವಾರ ನೌಕಾಪಡೆಯ ಹೆಲಿಕಾಪ್ಟರ್‌ನ ನೆರವನ್ನೂ ಸಹ ಬಳಸಲಾಯಿತು.

Share this article