ಆಪರೇಷನ್ ಸಿಂದೂರ್‌ : ಪಿಎಂಗೆ ದೇವೇಗೌಡರಿಂದ ಮೆಚ್ಚುಗೆ ಪತ್ರ

KannadaprabhaNewsNetwork |  
Published : May 09, 2025, 12:32 AM ISTUpdated : May 09, 2025, 05:16 AM IST
ದೇವೇಗೌಡ | Kannada Prabha

ಸಾರಾಂಶ

ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಕೈಗನ್ನಡಿಯಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು : ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಕೈಗನ್ನಡಿಯಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಸೇನಾಪಡೆಯ ಕಾರ್ಯಚರಣೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಉಗ್ರರ ನೆಲೆಗಳ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ದಾಳಿಯ ವಿಧಾನವು ಪ್ರಬುದ್ಧ ಮತ್ತು ಸಂಯಮದಿಂದ ಕೂಡಿದೆ ಎಂದು ಬಣ್ಣಿಸಿದ್ದಾರೆ.

ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಮೋದಿ ಅವರು ಭಯೋತ್ಪಾದಕ ದಾಳಿ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಹಿಂದಿರುಗಿದ್ದು, ಯುರೋಪ್‌ಗೆ ತಮ್ಮ ಯೋಜಿತ ಭೇಟಿಯನ್ನು ರದ್ದುಗೊಳಿಸುವ ನಿರ್ಧಾರ ಪ್ರಸ್ತುತ ಬಿಕ್ಕಟ್ಟಿನ ಜವಾಬ್ದಾರಿ ಮತ್ತು ಸೂಕ್ಷ್ಮತೆ ಪ್ರತಿಬಿಂಬಿಸುತ್ತದೆ. ದೇಶದಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವ ಜೊತೆಗೆ, ವ್ಯೂಹಾತ್ಮಕ ಸಭೆಗಳನ್ನು ನಡೆಸಿ ಜಾಗತಿಕ ಬೆಂಬಲ ಸಜ್ಜುಗೊಳಿಸಲು ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ.

ಸಶಸ್ತ್ರ ಪಡೆಗಳಿಗೆ ಸ್ಫೂರ್ತಿ ನೀಡಲು ಮೊದಲ ದಿನದಿಂದಲೇ ತೆಗೆದುಕೊಂಡ ದೃಢ ನಿರ್ಧಾರದ ಕ್ರಮಗಳನ್ನು ಗಮನಿಸುತ್ತಿದ್ದೇನೆ. ಕಳೆದ ಎರಡು ವಾರಗಳಿಂದ ಬಹಳ ಒತ್ತಡ ಮತ್ತು ಸಂಯಮದಿಂದ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇವರು ಅವರಿಗೆ ದುಷ್ಟರನ್ನು ಹತ್ತಿಕ್ಕುವ ಸರ್ವಶಕ್ತಿ ನೀಡಲಿ. ದೇಶ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿಯೂ ಸಿಗಲಿ. ಕಠಿಣ ಸಂದರ್ಭದಲ್ಲಿ ದೇಶದ ನಾಯಕತ್ವ ವಹಿಸಿರುವ ನಿಮ್ಮ ಹೆಸರು ಇತಿಹಾಸದಲ್ಲಿ ಪ್ರಕಾಶಮಾನವಾಗಿ ದಾಖಲಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಧ್ಯಾತ್ಮಿಕ ಪ್ರಜ್ಞೆ, ಆಳವಾದ ಚಿಂತನೆ ಮತ್ತು ನಿರಂತರ ಪ್ರಾರ್ಥನೆ ಇಲ್ಲದೆ ಸಮತೋಲನ ಮತ್ತು ಸಮಚಿತ್ತತೆ ಕಂಡುಕೊಳ್ಳುವುದು ಸುಲಭವಲ್ಲ ಎಂಬುದು ತಿಳಿದಿದೆ. ಇಚ್ಛಾಶಕ್ತಿಯನ್ನು ಸಶಕ್ತವಾಗಿ ಪ್ರದರ್ಶಿಸಿದ್ದಾರೆ. ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಅವರ ನಾಯಕತ್ವಗುಣ ಸ್ಪಷ್ಟವಾಗಿ ಗೋಚರಿಸಿದೆ. ಭಯೋತ್ಪಾದನೆಯಂಥ ಅಧರ್ಮದ ವಿರುದ್ಧ ನಾವು ಧರ್ಮ ಯುದ್ಧವನ್ನು ನಡೆಸುತ್ತಿರುವಾಗ ದೇವರು ಅವರ ಜೊತೆಯಲ್ಲಿಯೇ ಇರಲಿ. ಭಾರತವು ಶಾಂತಿಪ್ರಿಯ ರಾಷ್ಟ್ರ ಮತ್ತು ಯಾವಾಗಲೂ ಜಗತ್ತಿನಲ್ಲಿ ಸಕಾರಾತ್ಮಕತೆಯ ಬೆಳಕು ಹರಡಿದೆ. ಆದರೆ ಯಾರಾದರೂ ರಾಷ್ಟದ ಶಾಂತಿಪ್ರಿಯತೆಯನ್ನೇ ದೌರ್ಬಲ್ಯವೆಂದು ನೋಡಿದರೆ, ನಾವು ಎಷ್ಟು ಸಮರ್ಥರು ಎಂಬುದನ್ನು ತೋರಿಸಿ ಕೊಡಲಾಗಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ