ಆಪರೇಷನ್‌ ಸಿಂದೂರ: ಗಂಗಾವತಿಯಲ್ಲಿ ತಿರಂಗಾ ಯಾತ್ರೆ

KannadaprabhaNewsNetwork | Published : May 23, 2025 12:36 AM
ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹೋರಾಡಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಿಂದ ನಮ್ಮ ಸೈನಿಕರು ಉಗ್ರರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಈ ಮೂಲಕ ತಕ್ಕ ಪಾಠ ಕಲಿಸುವ ಜತೆಗೆ ಜಗತ್ತಿಗೆ ಭಾರತದ ಸೈನ್ಯದ ಪ್ರದರ್ಶನ ತೋರಿಸಲಾಗಿದೆ.
Follow Us

ಗಂಗಾವತಿ:

ಪಹಲ್ಗಾಮ್‌ನಲ್ಲಿ ಉಗ್ರರು ಹಿಂದೂಗಳನ್ನು ಹತ್ಯೆಗೈದ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್‌ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ತಿರಂಗಾ ಯಾತ್ರೆ ನಡೆಯಿತು.

ನಗರದ ಶ್ರೀಕೃಷ್ಣದೇವರಾಯ ವೃತ್ತದಿಂದ ಮಹಾತ್ಮಗಾಂಧಿ ವೃತ್ತದ ವರೆಗೆ ಜರುಗಿದ ತಿರಂಗಾ ಯಾತ್ರೆಯಲ್ಲಿ ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳು ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಹೋರಟ ವಿದ್ಯಾರ್ಥಿಗಳು ಜಾಥಾದಲ್ಲಿ ಭಾರತ ಮಾತಕೀ ಜೈ, ನರೇಂದ್ರ ಮೋದಿಗೆ ಜೈ ಎಂದು ಘೋಷಣೆ ಕೂಗಿದರು. ನಂತರ ಮಹಾತ್ಮಗಾಂಧಿ ವೃತ್ತದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಯೋಧರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಂಸದ ಶಿವರಾಮಗೌಡ, ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹೋರಾಡಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಿಂದ ನಮ್ಮ ಸೈನಿಕರು ಉಗ್ರರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಈ ಮೂಲಕ ತಕ್ಕ ಪಾಠ ಕಲಿಸುವ ಜತೆಗೆ ಜಗತ್ತಿಗೆ ಭಾರತದ ಸೈನ್ಯದ ಪ್ರದರ್ಶನ ತೋರಿಸಲಾಗಿದೆ ಎಂದರು.

ಪಹಲ್ಗಾಮ್‌ನಲ್ಲಿ ಉಗ್ರಗರು ಪತ್ನಿ, ಮಕ್ಕಳು ಎದುರು ಹಿಂದೂಗಳನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಸಹೋದರಿಯರ ಸಿಂದೂರ ಅಳಿಸಿದರು. ಇದಕ್ಕೆ ಆಪರೇಷನ್‌ ಸಿಂದೂರ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪಾಕಿಸ್ತಾನದ ಕುಮ್ಮಕ್ಕಿನಿಂದ ಕಾಶ್ಮೀರ ಸೇರಿದಂತೆ ಭಾರತದಲ್ಲಿ ಉಗ್ರರ ಕೃತ್ಯಗಳು ನಡೆಯುತ್ತಿವೆ. ಇದೀಗ ನಮ್ಮ ಸೈನಿಕರು ಪಾಕಿಸ್ತಾನದಲ್ಲಿರುವ ಉಗ್ರರ ತಾಣ, ಕಚೇರಿ ಹಾಗೂ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಇನ್ನೊಮ್ಮೆ ಪಾಕಿಸ್ತಾನ ಪಹಲ್ಗಾಮ್‌ನಂತಹ ದಾಳಿಗೆ ಕುಮ್ಮಕ್ಕು ನೀಡಿದರೆ ಭೂಪಟದಲ್ಲಿಯೇ ಇಲ್ಲದಂತೆ ನಮ್ಮ ಸೈನಿಕರು ಮಾಡುತ್ತಾರೆ ಎಂದರು.

ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ಶತ್ರು ದೇಶದ ಮೇಲೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ನಿರ್ಧಾರಕ್ಕೆ ಪಕ್ಷಾತೀತವಾಗಿ ಎಲ್ಲರು ಬೆಂಬಲಿಸಬೇಕು ಎಂದರು.

ಡಾ. ಕೊಟ್ಟೂರು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾಥಾದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಉದ್ಯಮಿ ನೆಕ್ಕಂಟಿ ಸೂರ್ಯಬಾಬು, ಕೆ. ಚೆನ್ನಬಸಯ್ಯಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ, ನಗರಸಭೆ ಮಾಜಿ ಸದಸ್ಯ ವೀರಭದ್ರಪ್ಪನಾಯಕ, ವಕೀಲರ ಸಂಘದ ಅಧ್ಯಕ್ಷ ಎಚ್.ಎನ್. ನಾಯಕ, ಕೆಲೋಜಿ ಶ್ರೀನಿವಾಸ ಶ್ರೇಷ್ಠಿ, ಡಾ. ಚಿನಿವಾಲರ್, ತಿಪ್ಪೇರುದ್ರಸ್ವಾಮಿ, ಎಚ್.ಎಂ. ಸಿದ್ದರಾಮಸ್ವಾಮಿ, ವಕೀಲ ಮಲ್ಲಿಕಾರ್ಜುನ ಮುಸಾಲಿ, ಕಾಶಿನಾಥ ಚಿತ್ರಗಾರ, ನಗರಸಭೆ ಅಧ್ಯಕ್ಷೆ ಹೀರಾಬಾಯಿ, ಸದಸ್ಯ ವಾಸುದೇವ ನವಲಿ, ಚೆನ್ನಪ್ಪ ಮಳಗಿ, ಹುಸೇನಪ್ಪಸ್ವಾಮಿ, ಎನ್. ಪ್ರಹ್ಲಾದರಾವ್‌ ವಕೀಲರು, ಎಚ್.ಎಂ. ಮಂಜುನಾಥ ಸ್ವಾಮಿ, ನರಸಿಂಗರಾವ ಕುಲಕರ್ಣಿ ಸೇರಿದಂತೆ ಇತರರು ಭಾಗವಹಿಸಿದ್ದರು.