ಮುಂಡಗೋಡ: ಕೃಷಿ ಭೂಮಿಯಲ್ಲಿ ಅಕ್ರಮವಾಗಿ ತಯಾರಿಸಲಾದ ಇಟ್ಟಿಗೆ ಬಟ್ಟಿಯನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಮುಂಡಗೋಡ ತಹಸೀಲ್ದಾರ ಶಂಕರ ಗೌಡಿ ಮಂಗಳವಾರ ಚಾಲನೆ ನೀಡಿ ಇಟ್ಟಿಗೆ ಬಟ್ಟಿ ಮಾಲಿಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲಿನ ಇಟ್ಟಿಗೆ ಬಟ್ಟಿ ಮಾಲಿಕರು ಸ್ಥಳಕ್ಕಾಗಮಿಸಿ ದಯವಿಟ್ಟು ತೆರವುಗೊಳಿಸಬೇಡಿ ನಮ್ಮಿಂದ ತಪ್ಪಾಗಿದ್ದು, ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ ಶಂಕರ ಗೌಡಿ, ಒಂದು ಸಣ್ಣ ಅಂಗಡಿ ತೆರೆಯಬೇಕೆಂದರೂ ಅನುಮತಿ ಪಡೆಯಬೇಕು. ಅಂತಹದರಲ್ಲಿ ಕೃಷಿ ಚಟುವಟಿಕೆ ನಡೆಸಬೇಕಾದ ಭೂಮಿಯಲ್ಲಿ ಪೂರ್ವಾನುಮತಿ ಇಲ್ಲದೆ ಅಕ್ರಮವಾಗಿ ಇಟ್ಟಿಗೆ ತಯಾರಿಸುತ್ತಿರುವ ನೀವು ಇಟ್ಟಿಗೆ ಕಾರ್ಖಾನೆಯನ್ನೇ ತೆರೆದಿದ್ದೀರಿ. ಕಾನೂನು ಪ್ರಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ಅಧಿಕೃತವಾಗಿ ಪ್ರಾರಂಭಿಸಿ ನಮ್ಮ ಅಭ್ಯಂತರವೇನಿಲ್ಲ. ಅದು ಬಿಟ್ಟು ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನೀರು ವಿದ್ಯುತ್ ಬಳಕೆ ಮಾಡಿಕೊಂಡು ನಿಮ್ಮ ಮನಬಂದಂತೆ ನಡೆದುಕೊಳ್ಳುತ್ತೀರೇನು ಎಂದು ಪ್ರಶ್ನಿಸಿದರು.
ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ನೀಡಿ ಎಂದು ಇಟ್ಟಿಗೆ ಬಟ್ಟಿ ಮಾಲಿಕರು ಅಂಗಲಾಚಿ ತೀವ್ರ ಮನವಿ ಮಾಡಿಕೊಂಡ ಬಳಿಕ ಮನಸ್ಸು ಬದಲಾಯಿಸಿದ ತಹಸೀಲ್ದಾರ, ಇದು ಸ್ಯಾಂಪಲ್ ಮಾತ್ರ ಒಂದು ವಾರ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಒಂದು ತುಂಡು ಇಟ್ಟಿಗೆ ಇಲ್ಲದಂತೆ ತೆರವುಗೊಳಿಸಿ ಸಂಪೂರ್ಣ ಸಾಗುವಳಿ ಜಮೀನಾಗಿ ಪರಿವರ್ತಿಸಬೇಕು. ಇಲ್ಲದಿದ್ದರೆ ಮತ್ತೆ ನಾಲ್ಕೈದು ಜೆಸಿಬಿಯೊಂದಿಗೆ ಆಗಮಿಸಿ ನೆಲಸಮಗೊಳಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ತೆರಳಿದರು.