ಕನ್ನಡಪ್ರಭ ವಾರ್ತೆ ಮಂಡ್ಯ
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೆಲ ವಿದ್ಯಾರ್ಥಿಗಳು ನಾಡು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿವಿನ ಬಗ್ಗೆ ಖುಷಿಯಿಂದಲೇ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ.
---------ಸಾಹಿತ್ಯ ಸಮ್ಮೇಳನ ಯುವಜನತೆಗೆ ಸುವರ್ಣಾವಕಾಶವಾಗಿದೆ. ಸಮ್ಮೇಳನದಲ್ಲಿ ನಡೆಯುವ ಪ್ರತಿಯೊಂದು ಗೋಷ್ಠಿಗಳು, ಹಿರಿಯ ಸಾಹಿತಿಗಳ ಚಿಂತನೆಗಳು ನಮ್ಮ ಬದುಕಿಗೆ ದಾರಿದೀಪವಾಗುತ್ತವೆ. ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಬೇಕು. ಸಾಹಿತಿಗಳು ಬರೆದಿರುವ ಪುಸ್ತಕಗಳು, ಕಾದಂಬರಿಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಬೇಕು.
-------------
ಎನ್ .ಹರೀಶ್ , ಮೈಸೂರು, ಸಂಶೋಧನಾ ವಿದ್ಯಾರ್ಥಿ.
ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಡಿಮೆ ಇದ್ದಾರೆ ಎಂದು ಮುಚ್ಚಲು ಮುಂದಾಗಿದೆ. ಇಂದಿನ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರು ತಮ್ಮ ಭಾಷಣದಲ್ಲಿ ಕನ್ನಡ ಶಾಲೆ ಉಳಿವಿನ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಹಿರಿಯ ಸಾಹಿತಿ ಗೊ.ರು.ಚ ಹೇಳಿದಂತೆ ಶಾಲೆಯಲ್ಲಿ ಏಕ ವಿದ್ಯಾರ್ಥಿ ಇದ್ದರೆ ಆ ವಿದ್ಯಾರ್ಥಿಗೆ ಅದೇ ಶಾಲೆಯಲ್ಲಿ ಶಿಕ್ಷಣ ಕೊಡಿಸಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚಬಾರದು. ಇದರಿಂದ ಭವಿಷ್ಯದಲ್ಲಿ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ.
-------------
ಎನ್.ರಕ್ಷಿತಾ, ಬಿಎಡ್ ವಿದ್ಯಾರ್ಥಿನಿ , ಮಿಕ್ಕೆರೆ, ಮಳವಳ್ಳಿ ತಾಲೂಕು ಮಂಡ್ಯ ಜಿಲ್ಲೆ,
ಬಹುತೇಕರಿಗೆ ಇಂದು ಇಂಗ್ಲೀಷ್ ಭಾಷಾ ವ್ಯಾಮೋಹ ಹೆಚ್ಚಾಗಿ ಮಾತೃಭಾಷೆ ಕನ್ನಡದ ಬಗ್ಗೆ ಕೀಳರಿಮೆ ಉಂಟಾಗಿದೆ. ಇದು ನಿಜಕ್ಕೂ ಆತಂಕ ತರುವ ವಿಚಾರ. ಬಹುತೇಕ ಕಡೆ ಕನ್ನಡ ಭಾಷೆ ಗೊತ್ತಿದ್ದರೂ ಮಾತನಾಡುತ್ತಿಲ್ಲ. ಇದು ತಾಯಿ ಭಾಷೆಗೆ ಮಾಡುತ್ತಿರುವ ಅವಮಾನ. ಕನ್ನಡ ಭಾಷೆ ಮೇಲಿನ ಅಭಿಮಾನದಿಂದ ದೂರದ ಊರಿನಿಂದ ನಾಡಿನ ಹಬ್ಬವನ್ನು ಆಚರಿಸಲು ಬಂದಿದ್ದೇನೆ. ಇದರಲ್ಲಿ ರಾಜ್ಯದ ಪ್ರತಿಯೊಬ್ಬ ಕನ್ನಡಿಗರು ಭಾಗವಹಿಸಬೇಕು.
ಪರಶುರಾಮ್ , ಬಿಎಡ್ ವಿದ್ಯಾರ್ಥಿ, ಕೊಪ್ಪಳ ಜಿಲ್ಲೆ.-------------
ತೊಗರಿಯ ನಾಡಿನಿಂದ ಸಕ್ಕರೆ ನಾಡಿಗೆ ಬಂದಿದ್ದೇವೆ. ಸಾಹಿತ್ಯ ಸಮ್ಮೇಳನದಲ್ಲಿ ಸಕ್ಕರೆಯಂತೆ ಸಾಹಿತ್ಯದ ಸಿಹಿಯನ್ನು ಸವಿದಿದ್ದೇನೆ. ಮಾತೃಭಾಷೆ ಕನ್ನಡಕ್ಕೆ ನಾವು ಏನಾದರೂ ಕೊಡುಗೆ ಕೊಡಬೇಕು. ಮಂಡ್ಯ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ. ಇಲ್ಲಿಯ ಜನರ ಕನ್ನಡಾಭಿಮಾನ ನೋಡಿ ನನಗೆ ಖುಷಿಯಾಗಿದೆ. ನಾನು ಕೂಡ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಬೇಕು. ಇದಕ್ಕಾಗಿ ಹಲವು ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಕೊಂಡು ಹೋಗುತ್ತಿದ್ದೇನೆ.ಸೈಬಣ್ಣ ಬಿಎಡ್ ವಿದ್ಯಾರ್ಥಿ, ಬಂದರವಾಡ, ಗುಲ್ಬರ್ಗಾ ಜಿಲ್ಲೆ.
---------