ವಿರೋಧಿತನ ಪ್ರಧಾನಿ ಮೋದಿ ಡಿಎನ್ಎನಲ್ಲಿದೆ: ರಣದೀಪ್ ಸಿಂಗ್‌ ಸುರ್ಜೆವಾಲಾ

KannadaprabhaNewsNetwork | Updated : Apr 29 2024, 08:13 AM IST

ಸಾರಾಂಶ

ರಾಜ್ಯದ ಜನತೆ ಮೇಲೆ ಕೇಂದ್ರ ಹಗೆತನವಿದೆ. ಕಳೆದ ಸೆ.13ರಿಂದ ಮಾರ್ಚ್‌ ತಿಂಗಳವರೆಗೆ ರಾಜ್ಯದ ಸಚಿವರು ಹಾಗೂ ಮುಖ್ಯಮಂತ್ರಿ ದೇಶದ ಪ್ರಧಾನಿ, ಕೇಂದ್ರದ ಸಚಿವರು ಹಾಗೂ ಗೃಹ ಸಚಿವರನ್ನು ಭೇಟಿಯಾದರೂ ಯಾವುದೇ ಲಾಭ ಆಗಿಲ್ಲ 

 ಬೀದರ್‌ :  ನರೇಂದ್ರ ಮೋದಿ ಅವರ ಡಿಎನ್‌ಎದಲ್ಲಿ ಕರ್ನಾಟಕ ವಿರೋಧಿತನವಿದೆ. ಹೀಗಾಗಿ ಅವರ ವಿರುದ್ಧ ಭಾನುವಾರ ರಾಜ್ಯಾದ್ಯಂತ ಗೋ ಬ್ಯಾಕ್‌ ಘೋಷಣೆ ಜೋರಾಗಿ ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ ಸದಸ್ಯ ಹಾಗೂ ಕರ್ನಾಟಕದ ಉಸ್ತುವಾರಿಗಳಾದ ರಣದೀಪ್ ಸಿಂಗ್‌ ಸುರ್ಜೆವಾಲಾ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ಹಾಗೂ ಬೆಳೆ ಹಾನಿಯಾಗಿ ಸುಮಾರು 7 ತಿಂಗಳು ಕಳೆಯುತ್ತಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ಬರುವ ಪರಿಹಾರದ ಪೈಕಿ ನಯಾ ಪೈಸೆ ನೀಡಿಲ್ಲ ಹೀಗಾಗಿ ನರೇಂದ್ರ ಮೋದಿ ಡಿಎನ್‌ಎದಲ್ಲಿ ಕರ್ನಾಟಕದ ವಿರೋಧ ಇರುವುದು ಸ್ಪಷ್ಟ ಎಂದು ಆರೋಪಿಸಿದರು.

ಕಳೆದ ಸೆ.13ರಿಂದ ಮಾರ್ಚ್‌ ತಿಂಗಳವರೆಗೆ ರಾಜ್ಯದ ಸಚಿವರು ಹಾಗೂ ಮುಖ್ಯಮಂತ್ರಿ ದೇಶದ ಪ್ರಧಾನಿ, ಕೇಂದ್ರದ ಸಚಿವರು ಹಾಗೂ ಗೃಹ ಸಚಿವರನ್ನು ಭೇಟಿಯಾದರೂ ಯಾವುದೇ ಲಾಭ ಆಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಆಗುವವರೆಗೆ ತಾತ್ಕಾಲಿಕವಾಗಿ ರಾಜ್ಯ ಸರ್ಕಾರವೇ ರೈತರ ಖಾತೆಗೆ 2 ಸಾವಿರ ರು. ಹಾಕಿದೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿಯ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಭೀಕರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಂಚನೆ ಮಾಡಿ, ರಾಜ್ಯದ ಅನ್ನದಾತರಿಗೆ ಘೋರ ಅನ್ಯಾಯ ಮಾಡಿದೆ ಎಂದು ಹೇಳಿದರು.

ಬರ ಹಾನಿ ವೀಕ್ಷಣೆಗೆ ಕೇಂದ್ರ ತಂಡ ಬೀದರ್‌ಗೆ ಆಗಮಿಸಿ ವೀಕ್ಷಣೆ ನಡೆಸಿತು. ವರದಿ ನೀಡಿದ 30 ದಿನಗಳಲ್ಲಿ ಪರಿಹಾರ ನೀಡಬೇಕೆಂಬ ಕಾನೂನು ಇದೆ. ಆದರೆ ಬಿಡಿಗಾಸೂ ನೀಡಿಲ್ಲ. ದೆಹಲಿಯಲ್ಲಿ ಪರಿಹಾರಕ್ಕಾಗಿ ಸಚಿವ ಸಂಪುಟದೊಂದಿಗೆ ಧರಣಿ ನಡೆಸಿದ್ದೇವೆ ಆದರೂ ಕೂಡ ನೀಡಿಲ್ಲ ನಂತರ ಮಾ.23ರಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ ಮೋರೆ ಹೋಗಿ ಪ್ರಕರಣ ದಾಖಲಾಗಿದೆ ಎಂದರು.

ಆರ್‌. ಅಶೋಕ ಅರಿವಿಲ್ಲವ, ಸುರ್ಜೆವಾಲಾ ಪ್ರಶ್ನೆ: ರಾಜ್ಯದಲ್ಲಿರುವ ವಿರೋಧ ಪಕ್ಷದ ನಾಯಕರಾದ ಆರ್‌. ಅಶೋಕ ರಾಜ್ಯ ಸರ್ಕಾರ ಪರಿಹಾರ ಕೊಡಬಹುದು ಅಲ್ಲವೇ ಎಂಬ ಹೇಳಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸುರ್ಜೆವಾಲಾ, ಆರ್‌.ಅಶೋಕ್‌ಗೆ ಅರಿವಿಲ್ಲವೇ ಎಂದು ವ್ಯಂಗ್ಯವಾಡಿ ಈಗಾಗಲೇ ರಾಜ್ಯ ಸರ್ಕಾರ ರೈತರ ಖಾತೆಗೆ ತಾತ್ಕಾಲಿಕ ಪರಿಹಾರವಾಗಿ ತಲಾ 2 ಸಾವಿರ ರು.ಗಳನ್ನು ಅವರ ಖಾತೆಗೆ ಜಮೆ ಮಾಡಿದೆ. ಕೇಂದ್ರ ಪರಿಹಾರ ನೀಡದಿದ್ದಾಗ ನಮ್ಮ ರಾಜ್ಯದ ಬಿಜೆಪಿಯ 27 ಸಂಸದರು ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದರು. ರೈತರು ಯಾವುದೇ ಪಕ್ಷಕ್ಕೆ ಸಂಬಂಧಪಟ್ಟವರಲ್ಲ. ಹೀಗಾಗಿ ಅವರಿಗೆ ಪರಿಹಾರ ಬಿಜೆಪಿ ಸಂಸದರು ಕೇಂದ್ರಕ್ಕೆ ಮೊರೆ ಹೋಗಿ ಕಲ್ಪಿಸಿಕೊಡಬೇಕಿತ್ತು ಎಂದು ಸುರ್ಜೆವಾಲಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ರಹೀಮ್‌ ಖಾನ್‌, ಪಕ್ಷದ ಅಭ್ಯರ್ಥಿ ಸಾಗರ ಖಂಡ್ರೆ, ಎಂಎಲ್ಸಿಗಳಾದ ಅರವಿಂದಕುಮಾರ ಅರಳಿ, ಭೀಮರಾವ್‌ ಪಾಟೀಲ್‌, ಮಾಜಿ ಸಚಿವರಾದ ರಾಜಶೇಖರ ಪಾಟೀಲ್‌, ಮಾಜಿ ಶಾಸಕರಾದ ಅಶೋಕ ಖೇಣಿ, ವಿಜಯಸಿಂಗ್‌ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.

Share this article