ಬರಪೀಡಿತ ಪ್ರದೇಶಗಳಿಗೆ ವಿಪಕ್ಷನಾಯಕ ಆರ್ .ಅಶೋಕ್ ಭೇಟಿ.
ಕನ್ನಡಪ್ರಭ ವಾರ್ತೆ, ಕಡೂರುಸಂಕಷ್ಟದಲ್ಲಿರುವ ರೈತರ ವಿಷಯದಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದ ವಿರೋಧ ಪಕ್ಷಧ ನಾಯಕ ಆರ್.ಅಶೋಕ್ ಸರ್ಕಾರದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮದ ಬಳಿಯ ಶ್ರೀ ಸಂಗಮೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ನ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಗುರುಸ್ವಾಮಿ, ಮಹೇಶ್ ಮತ್ತಿತರ ರೈತರ ರಾಗಿ ಬೆಳೆ, ಜೋಳ ಹಾಳಾಗಿರುವ ಜಮೀನಿಗೆ ತೆರಳಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯ ಸರ್ಕಾರ ಬರದ ಘೋಷಣೆ ಮಾಡಲು ಮೀನಾ- ಮೇಷ ಎಣಿಸಿ ಬಳಿಕ ಘೋಷಣೆ ಮಾಡಿದೆ. ಸರ್ಕಾರದ ಬೊಕ್ಕಸದಿಂದ ಪರಿಹಾರ ನೀಡಬೇಕಾಗುತ್ತದೆ ಎಂಬ ಭಯದಿಂದ ತಡವಾಗಿ ಘೋಷಣೆ ಮಾಡಿದೆ ಎಂದು ಆರೋಪಿಸಿದರು.
ರೈತರಿಗೆ 800 ಕೋಟಿ ರು. ನೀಡಿದ್ದೇವೆ ಎಂದು ಮುಖ್ಯಮಂತ್ರಿಗಳು ಘೋಷಿಸಿ ಎಲ್ಲದಕ್ಕೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ನೀಡಿದೆ. ಆದನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿದೆ? ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಎಷ್ಟು ಹಣ ಇದೆ. ಮತ್ತು ಈಗಿನ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ರೈತರ ವಿಚಾರದಲ್ಲಿ ನಾಟಕ ಆಡುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಸದನದಲ್ಲಿ ಹೋರಾಟ ನಡೆಸಿ ರೈತರಿಗೆ ಸಿಗಬೇಕಾದ ನ್ಯಾಯಯುತ ಪರಿಹಾರ ಒದಗಿಸಲು ಹೋರಾಟ ಮಾಡಲಿದ್ದೇವೆ. ರೈತರಿಗೆ ಏಳು ಗಂಟೆ ಕರೆಂಟ್ ನೀಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಎರಡು ಗಂಟೆ ಕೂಡಾ ನೀಡು ವುದಿಲ್ಲ ಎಂದು ರೈತರೇ ಹೇಳುತ್ತಿದ್ದಾರೆ. ಟಿಸಿ ಕೆಟ್ಟು ಹೋದರೆ 3 ದಿನದಲ್ಲಿ ಬದಲಾಯಿಸುತ್ತೇವೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳುತ್ತಾರೆ. ಆದರೆ ಎರಡು ತಿಂಗಳಲ್ಲಿ ಬದಲಾಯಿಸಿದರೆ ಹೆಚ್ಚೆಂದು ರೈತರು ಹೇಳುತ್ತಾರೆ. ಇಂತಹ ಹಸಿ ಸುಳ್ಳು ಹೇಳುತ್ತಾ ರೈತರನ್ನು ಸರ್ಕಾರ ವಂಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ಜಿಪಂ ಮಾಜಿ ಸದಸ್ಯ ಕೆ.ಆರ್. ಮಹೇಶ್ ಒಡೆಯರ್, ಕಾವೇರಿ ಲಕ್ಕಪ್ಪ, ವನಮಾಲ ದೇವರಾಜ್ ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಜಿಗಣೇಹಳ್ಳಿ ನೀಲಕಂಠಪ್ಪ, ಅಡಿಕೆ ಚಂದ್ರು, ಕೆ.ಎನ್. ಬೊಮ್ಮಣ್ಣ, ಸವಿತಾ ರಮೇಶ್, ರಂಗನಾಥ್, ಎಂ.ಕೆ.ಸತೀಶ್, ಚಿಕ್ಕಪಟ್ಟಣಗೆರೆ ನಾಗರಾಜ್, ಎಚ್.ಎಂ. ರೇವಣ್ಣಯ್ಯ, ದಾನಿ ಉಮೇಶ್, ಮಲ್ಲಪ್ಪನಹಳ್ಳಿ ಶಶಿಕುಮಾರ್, ಮತ್ತಿತರಿದ್ದರು.---ಬಾಕ್ಸ್ ಸುದ್ದಿ---
ಅಭಿವೃದ್ಧಿ ವಿಚಾರದಲ್ಲಿ ನೈತಿಕತೆ ಕಳೆದುಕೊಂಡಿದೆ: ಆರೋಪರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ನೈತಿಕತೆ ಕಳೆದುಕೊಂಡಿದೆ. ಎಲ್ಲರಿಗೂ ನೆಮ್ಮದಿ ಎನ್ನುವ ಜಾಹೀರಾತು ನೀಡುತ್ತಾರೆ. ನೆಮ್ಮದಿ ಕೇವಲ ಕಾಂಗ್ರೆಸ್ಸಿನವರಿಗೆ, ಅಲ್ಲಿನ ಮಂತ್ರಿಗಳಿಗೆ ಹೊರತು ರೈತರಿಗಲ್ಲ. ಅವರೊಡನೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಆರ್ . ಅಶೋಕ್ ಕಿಡಿಕಾರಿದರು.