ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಸುಳ್ಳನ್ನು ಸತ್ಯವೆಂದು ಜನರನ್ನು ನಂಬಿಸಲು ಬಿಜೆಪಿ- ಜೆಡಿಎಸ್ ನವರು ಮುಂದಾಗಿದ್ದಾರೆ. ಆದರೆ ಅವರ ಪಿತೂರಿ ನಡೆಯುವುದಿಲ್ಲ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಕಿಡಿಕಾರಿದರು.ತಾಲೂಕಿನ ಎಚ್.ನಾಗಸಂದ್ರ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸುಳ್ಳನ್ನು ನೂರು ಬಾರಿ ಹೇಳಿದ ಮಾತ್ರಕ್ಕೆ ಅದು ಸತ್ಯವಾಗುವುದಿಲ್ಲ. ನಮ್ಮಪಕ್ಷ ಬಡವರಿಗೆ ಜನಪರ ಕೆಲಸಗಳನ್ನು ಮಾಡುತ್ತಿದೆ. ಇದನ್ನು ಸಹಿಸದ ವಿರೋಧ ಪಕ್ಷಗಳು ನಮ್ಮ ಪಕ್ಷ ಹಾಗೂ ಮುಖ್ಯಮಂತ್ರಿಯವರ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ತಾಲೂಕಿನಲ್ಲಿ ನಾವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದೇವೆ. ಕೆಲ ವಿಚಾರದಲ್ಲಿ ನಮಗೆ ಹಿನ್ನಡೆಯಾಗಿದೆ. ಕಾರ್ಯಕರ್ತರು ಹಾಗೂ ಮುಖಂಡರು ನೋವು ಮತ್ತು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಪಕ್ಷಕ್ಕಾಗಿ ದುಡಿದವರಿಗೆ ಮಾನ್ಯತೆ ಇಲ್ಲದೆ ಇತರರಿಗೆ ಆದ್ಯತೆ ನೀಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಮುಕ್ತವಾಗಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಮುಂಬರುವ ಜಿಪಂ, ತಾಪಂ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಗೆಲ್ಲಿಸುವ ಗುರಿ ನಮ್ಮ ಮುಂದಿದೆ. ಸರಕಾರದ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.ಸ್ಥಳೀಯ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿದೆ. ನಮ್ಮ15 ಜನ ಸದಸ್ಯರು ಭದ್ರವಾಗಿರೋಣ. ಯಾರನ್ನು ಮಾಡಬೇಕು ಎಂಬುದರ ಕುರಿತು ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಚರ್ಚಿಸೋಣ. ಅಲ್ಲಿಯವರೆಗೂ ಈ ಬಗ್ಗೆ ಒಗ್ಗಟ್ಟು ಕಾಪಾಡಿಕೊಳ್ಳೋಣ. ಆಗಸ್ಟ್-11ರಂದು ಸಮಾನತಾ ಸೌಧದಲ್ಲಿ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಹೆಚ್ಚಿನ ಯುವಕ ಯುವತಿಯರು ಭಾಗವಹಿಸಿ ಮೇಳವನ್ನು ಸದ್ಬಳಿಸಿಕೊಳ್ಳಬೇಕು ಎಂದರು.
ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷ ಬೆಸ್ಕಾಂ ಗಂಗಾಧರಪ್ಪ ಮಾತನಾಡಿ, ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಲು ಮಾಜಿ ಸಚಿವ ಶಿವಶಂಕರ ರೆಡ್ಡಿ ಅವರು ಕಾರಣ. ಕಷ್ಟವಿರಲಿ, ಸುಖವಿರಲಿ ಎಂದೂ ಅವರು ನಮ್ಮನ್ನು ಕೈಬಿಟ್ಟವರಲ್ಲ. ಆದ್ದರಿಂದ ನಾವು ಅವರ ನಾಯಕ್ವದ ಮೇಲೆ ನಂಬಿಕೆಯಿರಿಸಿ ಮುಂದುವರೆಯೋಣ. ಯಾರೂ ಎದೆಗುಂದಬೇಕಾದ ಅಗತ್ಯವಿಲ್ಲ. ಮುಂದೆ ಒಳ್ಳೆಯದಾಗುವ ವಿಶ್ವಾಸವಿದೆ ಎಂದರು.ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ವೇದಲವೇಣಿ ವೇಣು ಮಾತನಾಡಿ, ಶೀಘ್ರದಲ್ಲೇ ಪಕ್ಷದ ಸದಸ್ಯತ್ವ ನೋಂದಣಿ ಜೊತೆಗೆ ವಿವಿಧ ಪದಾಧಿಕಾರಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಪಕ್ಷ ಸಂಘಟಿಸಿ ಶಿವಶಂಕರರೆಡ್ಡಿ ಅವರ ಕೈ ಬಲಪಡಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಮುಖಂಡರಾದ ಮರಳೂರು ಹನುಮಂತರೆಡ್ಡಿ, ಎಚ್.ಎನ್.ಪ್ರಕಾಶ್ ರೆಡ್ಡಿ, ನರಪ್ಪಾರೆಡ್ಡಿ, ವಿ.ರಮೇಶ್, ಆರ್.ಪಿ.ಗೋಪಿನಾಥ್ ಸೇರಿ ಇನ್ನಿತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.