ಬೇಡ್ತಿ ವರದಾ ನದಿ ಜೋಡಣೆಗೆ ವಿರೋಧ ಅರ್ಥಹೀನ: ಸೋಮಶೇಖರ ಕೋತಂಬರಿ

KannadaprabhaNewsNetwork |  
Published : Sep 03, 2025, 01:01 AM IST

ಸಾರಾಂಶ

ಪರಿಸರಕ್ಕೆ ಹಾನಿಯಾಗದಂತೆ, ಹೆಚ್ಚಾಗಿ ಸಮುದ್ರ ಸೇರುವ ನೀರನ್ನು ರೈತರ ಭೂಮಿಗೆ ಬಳಸಿಕೊಳ್ಳಲು ತಕರಾರು ಮಾಡುವ ಮನಸ್ಥಿತಿ ಎಂದಿಗೂ ಸರಿ ಅಲ್ಲ.

ಹಾನಗಲ್ಲ: ಬೇಡ್ತಿ ವರದಾ ನದಿ ಜೋಡಣೆ ಸ್ಥಗಿತಗೊಳಿಸುವ ಹುನ್ನಾರದ ಎಲ್ಲ ಹೇಳಿಕೆಗಳೂ ಅರ್ಥಹೀನವಾಗಿದ್ದು, ನದಿಗಳು ರಾಷ್ಟ್ರೀಯ ಸಂಪತ್ತಾಗಿದ್ದು, ಈಗಾಗಲೇ ಕೇಂದ್ರ ರಾಜ್ಯ ಸರ್ಕಾರಗಳು ರೈತರ ಕೃಷಿ ಭೂಮಿ ಹಾಗೂ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಕಾರಾತ್ಮಕ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗಿರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಬೇಡ್ತಿ ವರದಾ ನದಿ ಜೋಡಣೆ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ, ಹೆಚ್ಚಾಗಿ ಸಮುದ್ರ ಸೇರುವ ನೀರನ್ನು ರೈತರ ಭೂಮಿಗೆ ಬಳಸಿಕೊಳ್ಳಲು ತಕರಾರು ಮಾಡುವ ಮನಸ್ಥಿತಿ ಎಂದಿಗೂ ಸರಿ ಅಲ್ಲ. ಸಮುದ್ರ ಸೇರಿ ಉಪ್ಪಾಗುವ ನೀರನ್ನು ನಮ್ಮ ಭೂಮಿಗೆ ಪಡೆಯಲು ನಮ್ಮ ಪ್ರಯತ್ನವಿದೆ. ಹಾವೇರಿ, ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಜನರ ಕುಡಿಯುವ ನೀರಿನ ಬವಣೆಗೂ ಬೇಡ್ತಿ ವರದಾ ನದಿ ಜೋಡಣೆ ಪರಿಹಾರವಾಗಿದೆ. ಇಷ್ಟಕ್ಕೂ ಇದಕ್ಕೆ ವಿರೋಧಿಸುತ್ತಿರುವವರ ಹೇಳಿಕೆಗಳೇ ನಿಜವಾಗಿ ಹುಚ್ಚು ಸಾಹಸದ ಹೇಳಿಕೆಗಳು. ಕೇಂದ್ರ ಸರ್ಕಾರ ಈಗಾಗಲೇ ನದಿ ಜೋಡಣೆ ಪಟ್ಟಿಯಲ್ಲಿ ಸೇರಿಸುವಾಗ ಎಲ್ಲ ಸಮೀಕ್ಷೆಯ ನಂತರವೇ ನಿರ್ಣಯಿಸಿದೆ ಎಂದರು.ಹಾವೇರಿ ಜಿಲ್ಲೆಯ ನೀರಾವರಿ ಯೋಜನೆ ಹೋರಾಟ ಸಮಿತಿ ಈ ಹಿಂದೆಯೇ ಸ್ವರ್ಣವಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಈ ಯೋಜನೆಯ ವಾಸ್ತವವನ್ನು ವಿವರಿಸಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ರೈತರಿಗೆ ಅನೂಕೂಲ ಆಗುವುದಾದರೆ ಯೋಜನೆಗೆ ವಿರೋಧ ಸಲ್ಲ ಎಂಬ ಅಭಿಪ್ರಾಯ ವ್ಯಕ್ತಡಿಸಿದ್ದಾರೆ ಎಂದರು.

ಇಷ್ಟಾಗಿಯೂ ಯೋಜನೆ ಸಾಕಾರಗೊಳ್ಳುವ ಹೊತ್ತಿನಲ್ಲಿ ತಕರಾರು ಮಾಡುವುದು ಮಾನವ ವಿರೋಧಿ ನೀತಿ ಆಗಿದೆ. ನಮ್ಮ ಹೋರಾಟದ ಫಲವಾಗಿ ಯೋಜನೆ ಮುಂಚೂಣಿಯಲ್ಲಿದೆ. ಇದನ್ನು ದಾರಿ ತಪ್ಪಿಸುವ ಹೇಳಿಕೆ ನೀಡಿ ಸರ್ಕಾರ ಹಾಗೂ ರೈತರ ಹಿತಕ್ಕೆ ಮುಜುಗುರ ತಂದೊಡ್ಡುವುದು ಬೇಡ ಎಂದು ಎಚ್ಚರಿಸಿ, ರೈತರೇ ರೈತರ ಯೋಜನೆಗಳನ್ನು ವಿರೋಧಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಸಾಲಬಾಧೆ: ರೈತ ಆತ್ಮಹತ್ಯೆ

ರಾಣಿಬೆನ್ನೂರು: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತಾಲೂಕಿನ ದಂಡಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.ರಾಮನಗೌಡ ಬಸನಗೌಡ ಮುಂದಿನಮನಿ(56) ಮೃತಪಟ್ಟ ರೈತ. ಇವರು 19 ಎಕರೆ ಜಮೀನು ಹೊಂದಿದ್ದು, ಕೃಷಿಗಾಗಿ ಹಲಗೇರಿ ಗ್ರಾಮದ ಕೆಸಿಸಿ ಬ್ಯಾಂಕ್‌ನಲ್ಲಿ ₹80 ಸಾವಿರ, ರಾಣಿಬೆನ್ನೂರಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ₹8 ಲಕ್ಷ, ಬೈರನಪಾದ ಶುಗರ್ ಫ್ಯಾಕ್ಟರಿಯಲ್ಲಿ ₹1 ಲಕ್ಷ, ಕೈಗಡ ₹4 ಲಕ್ಷ ಸೇರಿದಂತೆ ಒಟ್ಟು ₹13.80 ಲಕ್ಷ ಸಾಲ ಮಾಡಿದ್ದರು. ಕಳೆದ ಎರಡ್ಮೂರು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಸರಿಯಾಗಿ ಮಳೆ ಬೆಳೆಯಾಗದೆ ಸಾಲ ತೀರಿಸುವ ಚಿಂತೆಯಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ ಎಂದು ಮೃತರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ