ಕಾವೇರಿ ಆರತಿ, ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಿರೋಧ: ವಿವಿಧ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork |  
Published : Jun 12, 2025, 03:15 AM ISTUpdated : Jun 12, 2025, 11:32 AM IST
11ಕೆಎಂಎನ್ ಡಿ16,17 | Kannada Prabha

ಸಾರಾಂಶ

ಕೆ.ಆರ್.ಎಸ್ ನ ಅಣೆಕಟ್ಟೆ ಬಳಿ ಕಾವೇರಿ ಆರತಿ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

  ಶ್ರೀರಂಗಪಟ್ಟಣ :  ಕೆ.ಆರ್.ಎಸ್ ನ ಅಣೆಕಟ್ಟೆ ಬಳಿ ಕಾವೇರಿ ಆರತಿ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತಸಂಘ, ದಲಿತ ಸಂಘ, ಜಯಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಕನ್ನಂಬಾಡಿ ಅಣೆಕಟ್ಟೆ ಬಳಿ ಪ್ರತಿಭಟನೆ ನಡೆಸಿ, ಕಾವೇರಿ ಆರತಿ ಹಾಗೂ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಸಚಿವರು ಸಭೆಯಲ್ಲಿ ನುಡಿದಂತೆ ನಡೆದುಕೊಳ್ಳಬೇಕು. ಇಷ್ಟೆಲ್ಲಾ ವಿರೋಧದ ನಡುವೆಯೂ ಅಣೆಕಟ್ಟೆಯ ಭದ್ರತೆಗೆ ಧಕ್ಕೆಯುಂಟು ಮಾಡುವ ಯೋಜನೆಗಳನ್ನು ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ರೈತ ಸಂಘಟನೆಯ ಕೆಂಪೂಗೌಡ ಮಾತನಾಡಿ, ಈ ಹಿಂದೆ ಅಣೆಕಟ್ಟೆಗೆ ಕಲ್ಲು ಗಣಿಗಾರಿಕೆಯಿಂದ ಅಪಾಯ ಎದುರಾಗಿತ್ತು. ನಮ್ಮೆಲ್ಲರ ಹೋರಾಟದಿಂದ ಕಲ್ಲು ಗಣಿಗಾರಿಕೆ ನಿಂತಿದೆ. ಇದೀಗ ಸಾವಿರಾರು ಕೋಟಿ ರು. ವ್ಯಯಿಸಿ ಅಣೆಕಟ್ಟೆ ಬಳಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಣೆಕಟ್ಟೆಯ ಹಿತದೃಷ್ಟಿಯಿಂದ ಈ ಯೋಜನೆ ಕೈ ಬಿಟ್ಟು ಬೇರೆಡೆಗೆ ಸ್ಥಳಾಂತರ ಮಾಡಿಕೊಳ್ಳಬೇಕು. ಈ ಹಿಂದೆ ಸರ್ಕಾರ ಡಿಸ್ನಿಲ್ಯಾಂಡ್ ಮಾಡುವುದಾಗಿ ಹೇಳಿತ್ತು. ಇದೀಗ ಅಮ್ಯೂಸ್ ಮೆಂಟ್ ಪಾರ್ಕ್ ಎಂದು ಹೆಸರು ಬದಲಾಯಿಸಿ ಹಣ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಖ್ಯಾತ ಸಾಹಿತಿ ಹರಿಹರ ಪ್ರಿಯ ಮಾತನಾಡಿ, ಕಾಲ್ತುಳಿತ ಪ್ರಕರಣಕ್ಕೆ ಸಿಎಂ, ಡಿಸಿಎಂ ಕಾರಣ. ಸಹೋದರ ಸೋತಿದ್ದರಿಂದ ಡಿ.ಕೆ ಶಿವಕುಮಾರ್ ಅವರಿಗೆ ಹುಚ್ಚು ಹಿಡಿದಿದೆ. 30 ವರ್ಷ ರಜೆಯನ್ನೆ ಹಾಕದ ಐಪಿಎಸ್ ಅಧಿಕಾರಿ ದಯಾನಂದ್ ಅವರನ್ನು ಸಸ್ಪೆಂಡ್ ಮಾಡ್ತೀರಾ. ನಿಮ್ಮ ವಂಶಗಳೆಲ್ಲ ನಿರ್ನಾಮವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕಾವೇರಿ ಆರತಿ ನಡೆಸಲು ಉದ್ದೇಶಿಸಿರುವ ಕಾಮಗಾರಿ ಸ್ಥಳಕ್ಕೆ ರೈತ ನಾಯಕರು ಹಾಗೂ ಪ್ರತಿಭಟಾಕಾರರು ತೆರಳಲು ಮುಂದಾದರು. ಕೆಆರ್‌ಎಸ್ ನ ಕೈಗಾರಿಕಾ ಭದ್ರತಾ ಸಿಬ್ಬಂದಿ ನಿರಾಕರಿಸುತ್ತಿದ್ದಂತೆ ಹೋರಾಟಗಾರರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿ ಒಮ್ಮೆಗೆ 10 ಮಂದಿ ತೆರಳಿ ವೀಕ್ಷಿಸಿ ಬರುವಂತೆ ತಿಳಿಸಿದರು.

ವೀಕ್ಷಣೆ ವೇಳೆ ಪ್ರತಿಭಟನಾಕಾರರು, ಈಗಾಗಲೇ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಹೊರ ಸಾಗಿಸಿರುವುದು, ಮತ್ತಷ್ಟು ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಜಲಾಶಯದ ಕೆಳಭಾಗದ ರೈತರು ಜಮೀನುಗಳಿಗೆ ನೀರು ಹರಿಸಿಲು ಇದ್ದ ಸ್ಥಳದಲ್ಲೂ ಸಹ ಕಾಮಗಾರಿ ಕೈಗೊಂಡಿದ್ದು, ನದಿಗೆ ಮಣ್ಣು ಸುರಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ಗಾತ್ರದ ಪೈಪ್ ಅಳವಡಿಸಿ ನೀರು ಹರಿಸಲು ಮುಂದಾಗಿದ್ದಾರೆ. ಸಿಡಿಎಸ್, ವಿರಿಜಾ ಸೇರಿದಂತೆ ಇತರೆ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ. ಇದರಿಂದ ಕೆಳ ಭಾಗದ ರೈತರಿಗೆ ತೊಂದರೆ ಆಗಲಿದೆ. ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು.

ರೈತರ ಪ್ರತಿಭಟನೆ ಹಿನ್ನೆಲೆ ಎಎಸ್ಪಿ ಸಿ.ಇ.ತಿಮ್ಮಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ವೇಳೆ ಹೋರಾಟಗಾರರಾದ ಎಂ.ಬಿ.ನಾಗಣ್ಣಗೌಡ, ಜಯರಾಮ್, ಆರ್.ಟಿ.ಐ ಕಾರ್ಯಕರ್ತ ಕೆ.ಆರ್.ರವೀಂದ್ರ, ಮಂಜೇಶ್ ಗೌಡ, ಕೆ.ಆರ್.ಎಸ್ ಗ್ರಾಪಂ ಅಧ್ಯಕ್ಷೆ ಜಯಂತಿ, ಸದಸ್ಯ ಮಂಜುನಾಥ್ ಸೇರಿ ಇತರರು ಭಾಗವಹಿಸಿದ್ದರು.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ