ಸ್ಫೋಟಕ ದಾಸ್ತಾನು ಗೋದಾಮು ನಿರ್ಮಾಣಕ್ಕೆ ವಿರೋಧ

KannadaprabhaNewsNetwork | Published : Jul 2, 2024 1:37 AM
Follow Us

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆ ಬೆಟ್ಟಕ್ಕೆ ಹೊಂದಿಕೊಂಡಿರುವ ಪುರಾಣ ಪ್ರಸಿದ್ಧ ಕಂಚಗಲ್ ಮುನೇಶ್ವರ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಸ್ಫೋಟಕ ದಾಸ್ತಾನು ಗೋದಾಮು ನಿರ್ಮಿಸಿರುವುದನ್ನು ವಿರೋಧಿಸಿ ವಿವಿಧ ಮಠಾಧೀಶರು ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಬಾಣವಾಡಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆ ಬೆಟ್ಟಕ್ಕೆ ಹೊಂದಿಕೊಂಡಿರುವ ಪುರಾಣ ಪ್ರಸಿದ್ಧ ಕಂಚಗಲ್ ಮುನೇಶ್ವರ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಸ್ಫೋಟಕ ದಾಸ್ತಾನು ಗೋದಾಮು ನಿರ್ಮಿಸಿರುವುದನ್ನು ವಿರೋಧಿಸಿ ವಿವಿಧ ಮಠಾಧೀಶರು ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಬಾಣವಾಡಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.

ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ನೆಲಮಂಗಲ ತಾಲೂಕು ಹಾಗೂ ಮಾಗಡಿ ತಾಲೂಕಿನ ಗಡಿಯಲ್ಲಿರುವ ಕಂಚಗಲ್ ಮುನೇಶ್ವರ ದೇವಾಲಯದ ಬೆಟ್ಟದ ಸುತ್ತಮುತ್ತ 250 ಎಕರೆಗೂ ಅಧಿಕ ಅರಣ್ಯ ಪ್ರದೇಶವಿದೆ. ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳಿದ್ದು, ಪಕ್ಕದಲ್ಲೇ ದೇವಾಲಯವಿದೆ. ಆದರೆ ಈ ಬೆಟ್ಟದ ಬಳಿಯೇ ಕ್ರಷರ್‌ಗೆ ಸ್ಫೋಟಕಗಳನ್ನು ಪೂರೈಸುವ ಗೋದಾಮು ಸ್ಥಳೀಯರಿಗೆ ಮಾಹಿತಿ ನೀಡದೇ ಕಟ್ಟಡವನ್ನು ನಿರ್ಮಿಸಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕು. ಒಂದು ವೇಳೆ ಅನುಮತಿ ನೀಡಿದ್ದೇ ಆದರೆ ಸಹಸ್ರಾರ ರೈತರು, ಅಕ್ಕಪಕ್ಕದ ಗ್ರಾಮಸ್ಥರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

111 ಅಡಿ ಶ್ರೀಗಳ ಪ್ರತಿಮೆಗೂ ತೊಂದರೆ: ಪಾಲನಹಳ್ಳಿ ಮಠದ ಡಾ.ಶ್ರೀ.ಸಿದ್ದರಾಜು ಸ್ವಾಮೀಜಿ ಮಾತನಾಡಿ, ಸ್ಫೋಟಕ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಹಲವಾರು ಸಮಸ್ಯೆಗಳಾಗುತ್ತವೆ. ಇತ್ತೀಚೆಗೆ ಪಟಾಕಿ ದುರಂತ ಹಾಗೂ ತಮಿಳುನಾಡಿನಲ್ಲಿ ಸ್ಫೋಟಕ ದುರಂತ ಗಮನಿಸಿದ್ದೇವೆ. ಪಕ್ಕದಲ್ಲೇ ಐದಾರು ಗ್ರಾಮಗಳಿದ್ದು, ಕೃಷಿ ಭೂಮಿ ಇದೆ. ಲಿಂ.ಶಿವಕುಮಾರ ಮಹಾಸ್ವಾಮೀಗಳ ಹುಟ್ಟೂರಾದ ವೀರಾಪುರದಲ್ಲಿ 111 ಅಡಿ ಶ್ರೀಗಳ ಪ್ರತಿಮೆಗೂ ತೊಂದರೆಯಾಗುತ್ತದೆ. ಆದ್ದರಿಂದ ಈ ಸ್ಫೋಟಕ ಗೋದಾಮು ನಮಗೆ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ರೇಣುಕಾಪ್ರಸಾದ್ ಮಾತನಾಡಿ, ಕಳೆದ ನಾಲ್ಕು ದಿನಗಳ ಹಿಂದೆ, ಈ ಕುರಿತು ಪಂಚಾಯತಿ ಪರವಾನಗಿಗೆ ಮಾಹಿತಿ ಬಂದಿದೆ. ಪಂಚಾಯತಿ ಸದಸ್ಯರು ಒಗ್ಗಟ್ಟಾಗಿ ಈ ಗೋದಾಮನ್ನು ತಿರಸ್ಕರಿಸೋಣ, ಸಾಮಾನ್ಯ ಸಭೆಯಲ್ಲಿ ಚರ್ಚಿಸೋಣ. ಅನುಮತಿ ನೀಡದಂತೆ ಎಲ್ಲರೂ ಒಗ್ಗಟ್ಟಾಗಿ ವಿರೋಧಿಸೋಣ ಎಂದು ಹೇಳಿದರು.

ಗ್ರಾಪಂ ಪಿಡಿಒ ರವಿ ಪ್ರತಿಕ್ರಿಯಿಸಿ ಈ ಬಗ್ಗೆ ನಾನು ಸ್ಥಳ ಮಹಜರು ಮಾಡಿ ಸ್ಥಳ ಪರಿಶೀಲಿಸಿ ನಡೆಸಿ, ಸ್ಥಳೀಯರ ವಿರೋಧವಿದೆ ಎಂದು ವರದಿ ನೀಡುತ್ತೇನೆ. ಯಾವುದೇ ಒತ್ತಡಕ್ಕೆ ಮಣಿಯದೇ ಕ್ರಮಕೈಗೊಳ್ಳುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಪಿಡಿಒ ರವಿ, ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಸದಸ್ಯರಾದ ನರಸಿಂಹಮೂರ್ತಿ, ನಾಗರಾಜು, ಮುದ್ದಯ್ಯ, ವೆಂಕಟಗಿರಿಯಪ್ಪ, ಹರೀಶ್, ಮಂಜುನಾಥ್, ಕಿರಣ್, ಲಕ್ಷ್ಮಣ್, ಕೃಷ್ಣಮೂರ್ತಿ, ಮುಖಂಡರಾದ ಸುಬ್ಬಣ್ಣ, ಅರುಣಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ರೇಣುಕಪ್ರಸಾದ್, ಕಾರ್ಯದರ್ಶಿ ಪಾರ್ವತಮ್ಮ, ಪಂಚಾಯತಿ ಸಿಬ್ಬಂದಿ, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಟೋ 6 :

ದಕ್ಷಿಣಕಾಶಿ ಶಿವಗಂಗೆ ಬೆಟ್ಟಕ್ಕೆ ಹೊಂದಿಕೊಂಡಿರುವ ಕಂಚುಗಲ್ ಮುನೇಶ್ವರ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಸ್ಫೋಟಕ ದಾಸ್ತಾನು ಗೋದಾಮು ನಿರ್ಮಿಸಿರುವುದನ್ನು ವಿರೋಧಿಸಿ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.