ಐಪಿ ಸೆಟ್‌ಗಳಿಗೆ ಆಧಾರ್‌ ಜೋಡಣೆಗೆ ವಿರೋಧ: ರೈತ ಸಂಘ

KannadaprabhaNewsNetwork | Published : Jul 31, 2024 1:12 AM

ಸಾರಾಂಶ

ಐಪಿ ಸೆಟ್‌ಗಳಿಗೆ ಆಧಾರ್‌ ಕಾರ್ಡ್ ಜೋಡಣೆಯ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಐಪಿ ಸೆಟ್‌ಗಳಿಗೆ ಆಧಾರ್‌ ಕಾರ್ಡ್ ಜೋಡಣೆಯ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ರೈತರು ಐಪಿ ಸೆಟ್‌ಗಳನ್ನು ಉಪಯೋಗಿಸುತ್ತಲೇ ಬಂದಿದ್ದಾರೆ. 10 ಎಚ್.ಪಿ ವರೆಗಿನ ಐಪಿ ಸೆಟ್‌ಗಳಿಗೆ ವಿದ್ಯುತ್‌ಚ್ಛಕ್ತಿ ದರ ಇಲ್ಲ. ಆದರೂ ಕೂಡ ಐಪಿ ಸೆಟ್‌ಗಳಿಗೆ ಆಧಾರ್‌ಕಾರ್ಡ್ ಜೋಡಿಸಬೇಕು ಎಂಬ ನಿಯಮ ಮಾಡಿರುವುದರ ಉದ್ದೇಶ ಏನು? ಇದರ ಹಿಂದೆ ವಿದ್ಯುತ್‌ಚ್ಛಕ್ತಿ ಖಾಸಗೀಕರಣದ ಹುನ್ನಾರ ಅಡಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಕೇಂದ್ರ ಸರ್ಕಾರ ಹಿಂದಿನ ಲೋಕಸಭೆಯಲ್ಲಿ ಖಾಸಗೀಕರಣ ಮಾಡುವ ಮಸೂದೆಯನ್ನು ಮಂಡಿಸಿ ಸದನ ಸಮಿತಿಗೆ ಕಳುಹಿಸಿತ್ತು. ರಾಜ್ಯ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ವಿದ್ಯುತ್‌ಚ್ಛಕ್ತಿಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಭರವಸೆ ಕೂಡ ನೀಡಿತ್ತು. ಪಕ್ಕದ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಸರ್ಕಾರಗಳು ವಿದ್ಯುತ್‌ಚ್ಛಕ್ತಿ ಖಾಸಗೀಕರಣ ಮಾಡುವುದಿಲ್ಲ ಎಂದು ವಿಧಾನಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸಿದೆ. ಅದೇ ರೀತಿ ರಾಜ್ಯ ಸರ್ಕಾರವು ಕೂಡ ಕಳುಹಿಸಬೇಕು ಎಂದು ಒತ್ತಾಯಿಸಿದರು.ಕೆಲವು ರೈತರದ್ದು ಪಹಣಿ ಖಾತೆ ಇಲ್ಲದ ಕಾರಣ ಆರ್.ಆರ್.ನಂ. ಸಿಕ್ಕಿರುವುದಿಲ್ಲ. ಇಂತಹ ರೈತರಿಗೆ ಆಧಾರ್ ಕಾರ್ಡ್ ನೊಂದಣಿ ಸಹ ಆಗುವುದಿಲ್ಲ. ಕರ್ನಾಟಕ ದಲ್ಲಿ 25 ಲಕ್ಷಕ್ಕೂ ಹೆಚ್ಚಿಗೆ ಐಪಿ ಸೆಟ್‌ಗಳಿವೆ ಅಕ್ರಮ ಸಕ್ರಮ ಯೋಜನೆಯಡಿ ಹಣ ಕಟ್ಟಿಸಿಕೊಂಡು ಈ ಹಿಂದೆ ಆರ್.ಆರ್.ನಂ. ಕೊಡುತ್ತಿದ್ದರು. ಈಗ ಅದನ್ನೂ ನಿಲ್ಲಿಸಿದ್ದಾರೆ ಎಂದು ದೂರಿದರು.ಸ್ವಯಂ ವೆಚ್ಚ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ರೈತರು ಐಪಿ ಸೆಟ್‌ಗಾಗಿ ೩ ರಿಂದ ೪ ಲಕ್ಷ ಬಂಡವಾಳ ಹೂಡಲು ಸಾಧ್ಯವಿಲ್ಲ. ವಿನಾಕಾರಣ ಆಧಾರ್‌ ಕಾರ್ಡ್ ಜೋಡಣೆ ಮಾಡುವ ಕ್ರಮ ರೈತರಿಗೆ ತೊಂದರೆ ಕೊಡುವ ಉದ್ದೇಶವೇ ಆಗಿದೆ. ಆದ್ದರಿಂದ ಕೂಡಲೇ ಇದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.ಪತ್ರಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪದಾಧಿಕಾರಿಗಳಾದ ಇ.ಬಿ.ಜಗದೀಶ್, ಕೆ.ರಾಘವೇಂದ್ರ, ಹಿಟ್ಟೂರು ರಾಜು, ಎಂ.ಡಿ. ನಾಗರಾಜ, ಗುರುಶಾಂತ, ಕಸಟ್ಟಿ ರುದ್ರೇಶ್, ಹನುಮಂತಪ್ಪ, ಜಿ.ಎನ್.ಪಂಚಾಕ್ಷರಿ, ಜ್ಞಾನೇಶ್, ಸಿ.ಚಂದ್ರಪ್ಪ ಮುಂತಾದವರಿದ್ದರು.

Share this article