ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಹೊರ ರಾಜ್ಯದ ದಲಾಲರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಸದಸ್ಯರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ವರ್ತಕರ ಸಂಘಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪರ ರಾಜ್ಯದವರ ಬಗ್ಗೆ ನಿಗಾ ಇರಲಿ:ಸ್ಥಳೀಯವ್ಯಾಪಾರಸ್ಥರ ಶ್ರಮದಿಂದ ಪ್ರಸ್ತುತ ಮಾರುಕಟ್ಟೆ ಮಾದರಿ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಆದರೆ ಇತ್ತೀಚೆಗೆ ತಮಿಳುನಾಡು ಮೂಲದವರು ದಲಾಲಿ ಅಂಗಡಿ ನಡೆಸಲು ಲೈಸೆನ್ಸ್ ಪಡೆದಿದ್ದಾರೆ. ಆದರೆ ಅಂತಹವರಿಗೆ ವ್ಯಾಪಾರಕ್ಕೆ ಅನುಮತಿ ನೀಡುವಂತೆ ವರ್ತಕರ ಸಂಘದ ವಾರ್ಷಿಕ ಸಭೆಯಲ್ಲಿ ಮನವಿ ಮಾಡಿದ್ದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಅನಾಮಧೇಯ ವ್ಯಕ್ತಿಗಳಿಗೆ ಅಂಗಡಿ ಬಾಡಿಗೆ ನೀಡಿದವರನ್ನೂ ಸೇರಿಕೊಂಡು ಅದಕ್ಕೆ ಒತ್ತಡ ಹೇರುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಘಟನೆ ಮರುಕಳಿಸದಂತೆ ನೋಡಿಕೊಳ್ಳಿ:ಸುರೇಶ ಛಲವಾದಿ ಮಾತನಾಡಿ, ಪಟ್ಟಣದಲ್ಲಿ ಇತ್ತೀಚೆಗೆ ಬಾಬು ಟ್ರೇಡಿಂಗ್ ಕಂ. ಎಂಬ ಹೆಸರಿನಿಂದ ಅನಾಮಧೇಯ ವ್ಯಕ್ತಿಯೊಬ್ಬ ಪಟ್ಟಣದ ಜನರಿಗೆ ಮೋಸವೆಸಗಿ ರು.1.5 ಕೋಟಿ ಪಂಗನಾಮ ಹಾಕಿದ್ದಾನೆ. ಇದಕ್ಕೆ ನಮ್ಮವರೊಬ್ಬರು ವ್ಯಾಪಾರಕ್ಕೆ ಸ್ಥಳವಾಕಾಶ ಮಾಡಿದ್ದೇ ಕಾರಣ, ಅಷ್ಟಕ್ಕೂ ಹೊರ ರಾಜ್ಯ ತಮಿಳುನಾಡಿನ ವ್ಯಾಪಾರಸ್ಥರಿಗೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಲಾಲಿ ಅಂಗಡಿ ಮಾಡಲು ಪರವಾನಗಿ ನೀಡಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕೆಂಬ ವಿಷಯವನ್ನು ಸುರೇಶ ಮೇಲಗಿರಿ ಎಂಬ ಸ್ಥಳೀಯ ವರ್ತಕರು ಸಭೆಯಲ್ಲಿ ಬಹಿರಂಗವಾಗಿ ಪ್ರಸ್ತಾಪಿಸಿದ್ದು ಇದರಿಂದ ಕನ್ನಡಿಗರಾದ ನಮ್ಮ ಮನಸ್ಸಿಗೆ ಸಾಕಷ್ಟು ನೋವು ತಂದಿದೆ. ವರ್ತಕರ ಸಂಘದ ಹೆಸರಿಗೆ ಮಸಿ ಬಳಿಯುವ ಹುನ್ನಾರ ಇದರಲ್ಲಡಗಿದೆ ಎಂದರು.ನಮ್ಮವರೆಲ್ಲಿಗೆ ಹೋಗಬೇಕು: ವ್ಯಾಪಾರಕ್ಕೆಂದು ಬಂದ ಬ್ರೀಟಿಷರು 200 ವರ್ಷ ದೇಶವನ್ನಾಳಿದ್ದು ಇದೀಗ ಇತಿಹಾಸ ಹೀಗಾಗಿ ಹೊರ ರಾಜ್ಯದ ದಲಾಲರು ಮತ್ತು ಖರೀದಿದಾರರು ವ್ಯಾಪಾರ ಮಾಡಲು ಇಲ್ಲಿಗೆ ಬಂದರೆ ನಮ್ಮವರು ತಮಿಳುನಾಡಿಗೆ ಹೋಗಬೇಕೆ..? ಇಂತಹ ಸಂದರ್ಭದಲ್ಲಿ ವೈಯಕ್ತಿಕ ದ್ವೇಷಗಳನ್ನು ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ, ಇವೆಲ್ಲ ಸಮಸ್ಯೆ ಗೊತ್ತಿರುವ ಸ್ಥಳೀಯ ಮೆಣಸಿನಕಾಯಿ ವರ್ತಕ ಸುರೇರ ಮೇಲಗಿರಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು ಎಷ್ಟರಮಟ್ಟಿಗೆ ಸರಿ...? ಆದ್ದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಸುರೇಶ ಮೇಲಗಿರಿ ಅವರಿಗೂ ಸಹ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡದಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಾಲತೇಶ ಹೆಬಸೂರ ಕಾರ್ಮಿಕ ಘಟಕದ ಫಕ್ಕೀರಪ್ಪ ಮ್ಯಾಗೇರಿ, ವಿಶ್ವನಾಥ ಬೋವಿ, ಪವನ ವಡ್ಡರ, ಪರುಷರಾಮ ಕುರಿಯವರ, ಚಂದ್ರಪ್ಪ ವಡ್ಡರ, ವಿಕ್ರಮ ಮಾಳಗಿ, ಸುರೇಶ ಕಮ್ಮಾರ, ಸಿದ್ದಪ್ಪ ಗುದಗಿ, ಅವಿನಾಶ ಚೆನ್ನಪ್ಪಗೌಡ್ರ, ಪ್ರಕಾಶ ಕಾಡಸಾಲಿ, ಸಂಜಯ ಛತ್ರದ, ಮಂಜುನಾಥ ಡೊಳ್ಳಿ ಸೇರಿದಂತೆ ಹಲವರು ಭಾಗವಿಸಿದ್ದರು.