ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತಸಂಘ, ದಲಿತ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork |  
Published : Jun 26, 2026, 01:30 AM IST
25 ಟಿವಿಕೆ 6 –ತುರವೇಕೆರೆ ತಾಲೂಕು ದಲಿತ ಸಂಘರ್ಷ ಸಮಿತಿ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ವಿದ್ಯುತ್ ಅನ್ನು ವ್ಯಾಪಾರಿ ಕ್ಷೇತ್ರವಾಗಿಸಲು ಹೊರಟಿರುವ ಟಾಟಾ ಕಂಪನಿ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕು ರೈತ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನೂರಾರು ಪದಾಧಿಕಾರಿಗಳು ಭಿತ್ತಿಪತ್ರ ಹಿಡಿದು ತಾಲೂಕು ಕಚೇರಿಯತನಕ ಮೆರವಣಿಗೆ ನಡೆಸಿ ವಿದ್ಯುತ್ ಅನ್ನು ವ್ಯಾಪಾರಿ ಕ್ಷೇತ್ರವಾಗಿಸಲು ಹೊರಟಿರುವ ಟಾಟಾ ಕಂಪನಿ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಶಿವಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಅನ್ನು ಖಾಸಗೀಕರಣ ಮಾಡಲು ಹೊರಟಿದೆ. ಈಗಾಲೇ ವಿವಿಧ ಯೋಜನೆಯಡಿ ಸಾರ್ವಜನಿಕರು ವಿದ್ಯುತ್ ಪಡೆಯುತ್ತಿದ್ದಾರೆ. ಇದರ ಜೊತೆಗೆ ಈಗಿನ ಸರ್ಕಾರ ಉಚಿತವಾಗಿ ಗೃಹಜ್ಯೋತಿ ಸಹ ನೀಡುತ್ತಿದೆ. ಇದರಿಂದ ಕೋಟ್ಯಂತರ ಮಂದಿ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಖಾಸಗೀಕರಣಗೊಳಿಸಿದರೆ ಎಲ್ಲವೂ ಇಲ್ಲದಾಗುತ್ತದೆ ಎಂದು ಹೇಳಿದರು. ರೈತರು ತಮ್ಮ ಕೊಳವೆ ಬಾವಿಗಳ ಮೂಲಕ ಉಚಿತವಾಗಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಖಾಸಗಿ ಕಂಪನಿಗೆ ವಿದ್ಯುತ್‌ ಪ್ರಸರಣವನ್ನು ನೀಡಿದರೆ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುತ್ತಾರೆ. ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಜೊತೆಗೆ ಗ್ರಾಹಕರಿಂದ ಹೆಚ್ಚುವರಿ ಶುಲ್ಕವನ್ನು ಕೂಡ ವಸೂಲು ಮಾಡುತ್ತಾರೆಂದು ಎಚ್ಚರಿಸಿದರು. ಆದ್ದರಿಂದ ನಮ್ಮನ್ನಾಳುವ ಸರ್ಕಾರಗಳು ಈ ಉದ್ದೇಶವನ್ನು ಕೈ ಬಿಟ್ಟು ರೈತ ಸ್ನೇಹಿಯಾಗಿ ಆಡಳಿತ ನಡೆಸಬೇಕು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಗೌಡ ಮಾತನಾಡಿ ವಿದ್ಯುತ್‌ ಖಾಸಗೀಕರಣದ ವಿರುದ್ಧ ಗ್ರಾಮ ಗ್ರಾಮಗಳಿಗೆ ತೆರಳಿ ಜನಜಾಗೃತಿ ಮಾಡಲಾಗುವುದು. ಖಾಸಗಿ ಕಂಪನಿಯವರ ಆಡಳಿತ ಬಂದಲ್ಲಿ ಜನಸಾಮಾನ್ಯರ ಭವಿಷ್ಯಕ್ಕೆ ಸಂಚಕಾರ ಬರಲಿದೆ. ಹಾಗಾಗಿ ಪ್ರತಿಯೊಬ್ಬ ನಾಗರೀಕರೂ ಸಹ ಖಾಸಗೀಕರಣ ವಿರೋಧಿಸಬೇಕೆಂದರು. ತಹಸೀಲ್ದಾರ್ ಎನ್.ಎ.ಕುಂಇ ಅಹಮದ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಡಿ ಎಸ್ ಎಸ್ ಸಂಚಾಲಕ ಮಲ್ಲೂರ್ ತಿಮ್ಮೇಶ್, ಮುಖಂಡರಾದ ಬೋರಪ್ಪ, ಮುತ್ತಗದಹಳ್ಳಿ ಶಿವಣ್ಣ, ಗೋವಿಂದರಾಜು, ವಿನಯ್, ಸಂತೋಷ್, ತಮ್ಮಯ್ಯ, ಡೊಂಕಿಹಳ್ಳಿ ನಾಗರಾಜು, ಕೆಂಪಯ್ಯ, ಮಧು ಸಿದ್ದಾಪುರ ಶಿವಶೇಖರ್, ಬಸವರಾಜು ಕಲ್ಕೆರೆ, ಅಫ್ಜಲ್, ಪರಮೇಶ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗರಪೇಟೆ ಗುಡ್ಡದಲ್ಲಿ ಮಣ್ಣು ಗಣಿಗಾರಿಕೆ ನಿಲ್ಲಿಸಿ
ಹಿರೀಕಾಟಿ: ಒತ್ತುವರಿದಾರರಿಗೆ ಜಾಗ ತೆರವು ಮಾಡಲು ಖಡಕ್‌ ಆದೇಶ, 7 ದಿನದ ಗಡುವು