ರಾಮಕೃಷ್ಣ ಕಾಂಗ್ರೆಸ್ ಸೇರ್ಪಡೆಗೆ ವಿರೋಧ

KannadaprabhaNewsNetwork | Published : Mar 21, 2024 1:01 AM

ಸಾರಾಂಶ

ಬಹಳ ವರ್ಷಗಳ ನಂತರ ಮಾದಿಗ ಸಮುದಾಯದ ಸುಜಾತಾ ದೊಡ್ಡಮನಿ ಅವರಿಗೆ ಕಾಂಗ್ರೆಸ್ ಪಕ್ಷ ಶಿರಹಟ್ಟಿ ಕ್ಷೇತ್ರಕ್ಕೆ ಟಿಕೇಟ ನೀಡಿತ್ತು. ಎರಡು ಬಾರಿಯೂ ಶಿರಹಟ್ಟಿ ಕ್ಷೇತ್ರದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಸಮುದಾಯ ಬೆಂಬಲಿಸಿ ಆಯ್ಕೆಗೊಳಿಸಿತ್ತು

ಮುಂಡರಗಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ ಸೋಲಿಗೆ ಕಾರಣರಾದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಯಾವುದೇ ಕಾರಣಕ್ಕೂ ಪುನಃ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬಾರದು ಎಂದು ತಾಲೂಕು ಮಾದಿಗರ ಸಮುದಾಯದ ಮುಖಂಡ ದುರ್ಗಪ್ಪ ಹರಿಜನ ವರಿಷ್ಠರನ್ನು ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳ ನಂತರ ಮಾದಿಗ ಸಮುದಾಯದ ಸುಜಾತಾ ದೊಡ್ಡಮನಿ ಅವರಿಗೆ ಕಾಂಗ್ರೆಸ್ ಪಕ್ಷ ಶಿರಹಟ್ಟಿ ಕ್ಷೇತ್ರಕ್ಕೆ ಟಿಕೇಟ ನೀಡಿತ್ತು. ಎರಡು ಬಾರಿಯೂ ಶಿರಹಟ್ಟಿ ಕ್ಷೇತ್ರದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಸಮುದಾಯ ಬೆಂಬಲಿಸಿ ಆಯ್ಕೆಗೊಳಿಸಿತ್ತು, ಆದರೆ ಇದೇ ಮಾದಿಗ ಸಮುದಾಯದವರಿಗೆ ಟಿಕೇಟ ಸಿಕ್ಕಾಗ ಮಾದಿಗರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಗೌರವ ಕೊಡದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅಂತವರು ಇದೀಗ ಮತ್ತೊಮ್ಮೆ ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದು, ಪಕ್ಷ ಅವರನ್ನು ಸೇರಿಸಿಕೊಂಡಲ್ಲಿ ಶಿರಹಟ್ಟಿ ಮತಕ್ಷೇತ್ರ ಒಳಗೊಂಡಂತೆ ಗದಗ-ಹಾವೇರಿ ಜಿಲ್ಲೆಯಲ್ಲಿ ಮಾದಿಗ ಸಮುದಾಯದವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಪಕ್ಷಕ್ಕೆ ಮತ್ತು ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದವರನ್ನು ಸೇರಿಸಿಕೊಳ್ಳಬಾರದು ಎಂದು ಎಚ್ಚರಿಸಿದರು.

ಲಕ್ಷ್ಮಣ ತಗಡಿನಮನಿ, ಮರಿಯಪ್ಪ ಸಿದ್ದಣ್ಣವರ ಮಾತನಾಡಿ, ಕಾಂಗ್ರೆಸ್ ಈಗಾಗಲೇ ದೊಡ್ಡಮನಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಅವರನ್ನು ಸೇರಿಸಿಕೊಂಡರೆ ಕಾಂಗ್ರೆಸ್ಸಿಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಳು ಬರುತ್ತವೆ ಎಂಬ ಭ್ರಮೆ ಬೇಡ, ಇವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡರೆ ಕಾಂಗ್ರೆಸ್ ಅಧಿಕೃತ ಲೋಕಸಭಾ ಅಭ್ಯರ್ಥಿ ವಿರುದ್ಧ ಮಾದಿಗ ಸಮುದಾಯದವರು ಹಾವೇರಿ ಕ್ಷೇತ್ರಾದ್ಯಂತ ವಿರೋಧ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಲ್ಲೇಶ ಹರಿಜನ (ಕಕ್ಕೂರ,) ಬಸವರಾಜ ಪೂಜಾರ, ನಿಂಗಪ್ಪ ಪೂಜಾರ, ನಿಂಗರಾಜ ಹಾಲಿನವರ, ಸಂತೋಷ ಹಡಗಲಿ, ದುರ್ಗಪ್ಪ ದೊಡ್ಡಮನಿ, ದುರ್ಗಪ್ಪ ಬೂತಾಳಿ, ಮಂಜುನಾಥ ಹರಿಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article