ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣದಲ್ಲಿರುವ ತಹಸೀಲ್ ಕಚೇರಿಯನ್ನು ಪಟ್ಟಣದಿಂದ 3 ಕೀ.ಮಿ ದೂರದಲ್ಲಿರುವ ನೀರಾವರಿ ಕ್ಯಾಂಪ್ ಬಳಿ ಹೊಸದಾಗಿ ಕಟ್ಟುತ್ತಿರುವ ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರ ಮಾಡದಂತೆ ಸಾಮಾಜಿಕ ಹೋರಾಟಗಾರ ಈರಣ್ಣ ಪಂಚಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಅಫಜಲ್ಪುರ ಪಟ್ಟಣದ ಮಳೇಂದ್ರ ಮಠದಿಂದ ತಹಸೀಲ್ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ ಶರಣಬಸಪ್ಪ ಹೊಸಮನಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಸಾಮಾಜಿಕ ಹೋರಾಟಗಾರ ಈರಣ್ಣ ಪಂಚಾಳ ಮಾತನಾಡಿ ಅನೇಕ ವರ್ಷಗಳಿಂದ ಪಟ್ಟಣದ ಹೃದಯ ಭಾಗದಲ್ಲಿರುವ ತಹಸೀಲ್ ಕಚೇರಿ ಈಗ ಪಟ್ಟಣದಿಂದ 3 ಕೀ.ಮಿ ದೂರದಲ್ಲಿ ಸ್ಥಳಾಂತರ ಮಾಡುತ್ತಿರುವುದು ನಿಜಕ್ಕೂ ಘೋರ ಅನ್ಯಾಯವಾಗಲಿದೆ. ನಿತ್ಯ ಹತ್ತಾರು ಊರುಗಳಿಂದ ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಈಗ ಪಟ್ಟಣದಿಂದ ದೂರದಲ್ಲಿರುವ ಹೊಸ ಕಚೇರಿಗೆ ಹೋಗಿ ಬರುವುದು ಕಷ್ಟವಾಗಲಿದೆ. ಅದರಲ್ಲೂ ರೈತರು, ವೃದ್ಧರಿಗೆ ಸಾಧ್ಯವಾಗುವುದಿಲ್ಲ. ಈಗಿರುವ ಕಚೇರಿ ಸ್ಥಳಾಂತರವಾದರೆ ಇಲ್ಲಿನ ವ್ಯಾಪಾರ ವಹಿವಾಟುಗಳೆಲ್ಲಾ ನೆಲಕಚ್ಚಲಿವೆ. ಪಟ್ಟಣದ ಸಿರಿಯೇ ಹಾಳಾಗಲಿದೆ ಹೀಗಾಗಿ ಸ್ಥಳಾಂತರಕ್ಕೆ ಯಾರು ದುಸ್ಸಾಹಸ ಮಾಡಬಾರದೆಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ, ಕೋಲಿ ಸಮಾಜದ ಮುಖಂಡ ಶಂಕು ಮ್ಯಾಕೇರಿ, ನಿವೃತ್ತ ಪ್ರಾದ್ಯಾಪಕ ಡಾ. ಎಂ.ಎಸ್ ಜೋಗದ, ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರ ಕಷ್ಟ ಅರಿವಾಗುತ್ತಿಲ್ಲ. ತಹಸೀಲ್ ಕಚೇರಿ ಸ್ಥಳಾಂತರವಾದರೆ ಸಾಕಷ್ಟು ಸಮಸ್ಯೆಗಳು ಉದ್ಭವವಾಗಲಿವೆ. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಾಧಕ ಬಾಧಕಗಳನ್ನು ಲೆಕ್ಕ ಹಾಕಿ ಸ್ಥಳಾಂತರವನ್ನು ಕೈಬಿಡಬೇಕು. ಈಗಿರುವ ಜಾಗದಲ್ಲೇ ಭವ್ಯ ಮಿನಿ ವಿಧಾನಸೌಧ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಸಾರ್ವಜನಿಕರು ಇದ್ದರು.