ದೊಡ್ಡಬಳ್ಳಾಪುರ: ಗೋಹತ್ಯೆ ನಿಷೇಧ ಕಾಯ್ದೆಯನ್ನು ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂ.ಗ್ರಾ ಜಿಲ್ಲಾ ವಿಶ್ವ ಹಿಂದೂ ಪರಿಷದ್ ಗೋರಕ್ಷಾ ವಿಭಾಗದ ಪದಾಧಿಕಾರಿಗಳು ಸೋಮವಾರ ದೊಡ್ಡಬಳ್ಳಾಪುರ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಈವರೆಗೂ ಪ್ರಬಲವಾದ ಗೋಹತ್ಯೆ ಕಾನೂನು ಜಾರಿಯಲ್ಲಿತ್ತು. ಗೋವುಗಳನ್ನು ಕದ್ದು ಸಾಗಾಟ ಮಾಡುವವರನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಬಲ ಕಾನೂನನ್ನು ಹಿಂದಿನ ಬಿಜೆಪಿ ಸರಕಾರ ಜಾರಿಗೊಳಿಸಿತ್ತು. ಸಿದ್ದರಾಮಯ್ಯ ಸರಕಾರ ಒಂದು ವರ್ಗವನ್ನು ಓಲೈಸುವ ಉದ್ದೇಶದಿಂದ ಕಾನೂನನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜರಂಗದಳ ಕೋಲಾರ ವಿಭಾಗ ಸಂಯೋಜಕ ನರೇಶ್ ಮಾತನಾಡಿ, ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರದ್ದುಗೊಳಿಸಲು ಈಗಿನ ಕಾಂಗ್ರೆಸ್ ಸರ್ಕಾರ ಉದ್ದೇಶಿಸಿರುವುದನ್ನು ಕೈ ಬಿಡಬೇಕು. ಹಿಂದೂ ಸಮಾಜಕ್ಕೆ ಅತ್ಯಂತ ಪೂಜನೀಯವಾದ ಗೋವಂಶವನ್ನು ಹಿಂಸಾತ್ಮಕವಾಗಿ ಕಳ್ಳಸಾಗಾಟ ಮಾಡುವಾಗ ಪೊಲೀಸರು ವಶಪಡಿಸಿದ ಸಾಗಾಟ ವಾಹನಗಳನ್ನು ಸುಲಭದಲ್ಲಿ ಹಿಂತಿರುಗಿಸುವಂತೆ ಮಾಡಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ನ್ನು ಸಡಿಲುಗೊಳಿಸಿ ತಿದ್ದುಪಡಿ ತರಲು ಮುಂದಾಗಿದ್ದಾರೆ. ಗೋವುಗಳಿಗೆ ಹಿಂಸೆ ಹೆಚ್ಚಾಗುವ ಸಾಧ್ಯತೆ ಇರುವ ಈ ತಿದ್ದುಪಡಿಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಅತಿ ಹೆಚ್ಚು ಗೋವಿನ ಕಳ್ಳ ಸಾಗಾಟ, ಗೋವಿನ ಅಕ್ರಮ ವಧೆ, ಗೋವಿನ ಮಾಂಸ ಮಾರಾಟ ಹೆಚ್ಚಿನ ಕಡೆಯಲ್ಲಿ ನಡೆಯುತ್ತಿದೆ . ಇದಕ್ಕೆ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ರವಿ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಪವನ್ ಸ್ವಾಮಿ, ಮುಖಂಡರಾದ ಚಂದನ್, ನಾಗರಾಜ್, ನರಸಿಂಹ, ದೀಪಕ್ ರಾಹುಲ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.ಫೋಟೋ-8ಕೆಡಿಬಿಪಿ2- ಗೋಹತ್ಯೆ ನಿಷೇಧ ಕಾಯ್ದೆಯನ್ನು ತಿದ್ದುಪಡಿ ತರಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂ.ಗ್ರಾ ಜಿಲ್ಲಾ ವಿಶ್ವ ಹಿಂದೂ ಪರಿಷದ್ ಪದಾಧಿಕಾರಿಗಳು ದೊಡ್ಡಬಳ್ಳಾಪುರದಲ್ಲಿ ಗೋವುಗಳೊಂದಿಗೆ ಪ್ರತಿಭಟನೆ ನಡೆಸಿದರು.