ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಯಾವುದೇ ಸಕಾರಣ ಇಲ್ಲದೇ ಅಧಿವೇಶನವನ್ನು ಎರಡ್ಮೂರು ದಿನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್‌ಗಳಿದ್ದವು. ಅವುಗಳಿಗೆಲ್ಲ ವಿರೋಧ ವ್ಯಕ್ತಪಡಿಸಿದವು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಆದಾಯ ತೆರಿಗೆ ಬಿಲ್ ಹಲವಾರು ವರ್ಷದಿಂದ ನನೆಗುದಿಗೆ ಬಿದ್ದಿದೆ. ಅನೇಕ ಬಿಲ್‌ಗಳನ್ನು ಪಾಸ್ ಮಾಡಲಾಯಿತು. ಜನಾದೇಶ ಸ್ವೀಕಾರ ಮಾಡದೇ ಸುಳ್ಳು ಹೇಳಿ, ಕಾಲಹರಣ ಮಾಡಲಾಗಿದೆ. ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ. ಆಪರೇಷನ್ ಸಿಂದೂರ ಬಗ್ಗೆ ಚರ್ಚೆ ಮಾಡಲು ಆಗ್ರಹಿಸಿದರೂ ಅದರ ಬಗ್ಗೆ ಚರ್ಚೆ ಮಾಡಲಿಲ್ಲ. ಪಹಲ್ಗಾಮ್ ಚರ್ಚೆ ಮಾಡಲಿಲ್ಲ. ಅವರ ಟ್ರ್ಯಾಕ್ ರೆಕಾರ್ಡ್ ಭೀಕರವಾಗಿದೆ ಅಂಥ ಅರ್ಥವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಭಯೋತ್ಪಾದಕ ಸಂಘಟನೆ ಬೆಂಬಲಿಸುವ ದೇಶಗಳ ಬಗ್ಗೆ ಹಾಗೂ ಘಟನೆ ನಡೆದ ಬಳಿಕ ನಡೆದುಕೊಂಡ ರೀತಿ ಕೆಟ್ಟದಾಗಿದೆ. ಅಧಿವೇಶನದಲ್ಲಿ 13 ಬಿಲ್ ಪಾಸ್ ಆಗಿದ್ದು, ಎರಡನ್ನು ಆಯ್ಕೆ ಕಮಿಟಿಗೆ ಕಳುಹಿಸಲಾಗಿದೆ ಎಂದರು.
ಈ ಬಾರಿ ಸಂಸತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ ಬಂಡವಾಳ ಕಳಚಿದೆ. ಅದರ ಸಿಟ್ಟಿಗೆ ಇಲ್ಲಸಲ್ಲದ ವಿಚಾರ ಚರ್ಚೆಗೆ ಅವಕಾಶ ಕೇಳಿದರು. ಮತದಾನದ ಗುರುತಿನ ಚೀಟಿಯಲ್ಲಿ ಸಣ್ಣ ಪುಟ್ಟ ಪ್ರಿಂಟಿಂಗ್ ಸಮಸ್ಯೆ ಆಗಿರುತ್ತದೆ. ದೇಶದ ಸಂಸತ್ತನ್ನು ಒತ್ತೆಯಾಳಾಗಿಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂತಹ ನಿರ್ಲಜ್ಜ ಪಕ್ಷದವರು ಅಧಿಕಾರಕ್ಕೆ ಬರುತ್ತಾರೆ ಎಂದು ಸಂವಿಧಾನದ ಬರೆದವರಿಗೆ ಐಡಿಯಾ ಇರಲಿಲ್ಲ. ಸಂಸತ್ತನ್ನು ದುರುಪಯೋಗ ಮಾಡಿಕೊಂಡು, ಕಾಂಗ್ರೆಸ್ ಹತಾಶೆಯಿಂದ ವರ್ತನೆ ಮಾಡುತ್ತಿದೆ. ಇದೇ ರೀತಿ ಮುಂದುವರಿದರೆ ದೇಶದಲ್ಲಿ ನೀವು ಜೀರೋ ಆಗುತ್ತೀರಿ ಎಂದು ಹೇಳಿದರು.ನಮ್ಮ ಧಾರ್ಮಿಕ ಆಚರಣೆಗಳನ್ನು ಒಪ್ಪಿಕೊಂಡು ಭಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವರು ಈ ಹಿಂದೆ ಭುವನೇಶ್ವರಿ ದೇವಿ (ಕನ್ನಡಾಂಬೆ) ಕುರಿತು ಮಾಡಿದ ಭಾಷಣದಿಂದ ಈಗ ವಿರೋಧ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.