ಜಾತಿ ಮುಂದೆ ಕ್ರಿಶ್ಚಿಯನ್‌ ಬಳಕೆಗೆ ವಿರೋಧ

KannadaprabhaNewsNetwork |  
Published : Sep 17, 2025, 01:05 AM IST
ಸಂಸದ ಯದುವೀರ್ ಒಡೆಯರ್ ನೇತೃತ್ವದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ-ಕರ್ನಾಟಕ ವತಿಯಿಂದ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳೊಂದಿಗೆ ‘ಕ್ರಿಶ್ಚಿಯನ್’ ಎಂದು ನಮೂದಿಸಿರುವುದನ್ನು ಹಿಂಪಡೆಯಬೇಕು ಹಾಗೂ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವವರಿಗೆ ಮೀಸಲಾತಿ ಸೌಲಭ್ಯ ದೊರೆಯುವುದಿಲ್ಲ ಎಂದು ಮುಖ್ಯಮಂತ್ರಿಗಳು ಬಹಿರಂಗವಾಗಿ ಘೋಷಿಸಬೇಕು ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ-ಕರ್ನಾಟಕ ವತಿಯಿಂದ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳೊಂದಿಗೆ ‘ಕ್ರಿಶ್ಚಿಯನ್’ ಎಂದು ನಮೂದಿಸಿರುವುದನ್ನು ಹಿಂಪಡೆಯಬೇಕು ಹಾಗೂ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವವರಿಗೆ ಮೀಸಲಾತಿ ಸೌಲಭ್ಯ ದೊರೆಯುವುದಿಲ್ಲ ಎಂದು ಮುಖ್ಯಮಂತ್ರಿಗಳು ಬಹಿರಂಗವಾಗಿ ಘೋಷಿಸಬೇಕು ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ-ಕರ್ನಾಟಕ ವತಿಯಿಂದ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಜಾತಿ ಸಮೀಕ್ಷೆಯ ಕಾಲಂನಲ್ಲಿ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌ ಹೀಗೆ ಹಿಂದೂ ಧರ್ಮದ ವಿವಿಧ ಜಾತಿಗಳೊಂದಿಗೆ ‘ಕ್ರಿಶ್ಚಿಯನ್‌’ ಪದ ನಮೂದಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಭೆಯು ಬಲವಾಗಿ ವಿರೋಧಿಸಿದೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಹಲವು ಜಾತಿ ಸಮುದಾಯಗಳ ಮುಖಂಡರು, ರಾಜಕೀಯ ಮುಖಂಡರ ಸಮ್ಮುಖ ನಡೆದ ಸಭೆ ಬಳಿಕ ನಿರ್ಣಯಗಳನ್ನು ಪ್ರಕಟಿಸಿದ ಮಾಜಿ ಸಚಿವ, ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್, ಒಟ್ಟು 46 ಜಾತಿಗಳ ಪಕ್ಕದಲ್ಲಿ ಕ್ರಿಶ್ಚಿಯನ್ ಪದ ಸೇರಿಸಿ ನೀಡಿರುವ ‘ಜಾತಿ ಕೋಡ್’ ವಾಪಸ್ ಪಡೆಯಲು ಆಯೋಗಕ್ಕೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಬೇಕು. ಹಾಲಿ ಇರುವ ರೀತಿಯಲ್ಲೇ ಸಮೀಕ್ಷೆ ನಡೆಸಿದರೆ ಮುಂದಿನ ದಿನಗಳಲ್ಲಿ ಮೀಸಲಾತಿಯಲ್ಲಿ ವ್ಯತ್ಯಾಸವಾಗುವ ಅಪಾಯವಿದೆ. ಅಲ್ಲದೆ, ಮತಾಂತರಕ್ಕೆ ಸರ್ಕಾರದಿಂದಲೇ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ತರಾತುರಿಯಲ್ಲಿ ಸಮೀಕ್ಷೆ ನಡೆಸುವ ಬದಲು, ರಾಜ್ಯದ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಬೇಸಿಗೆಯಲ್ಲಿ ನಡೆಸಬಹುದು. ಕೇಂದ್ರ ಸರ್ಕಾರ ಮುಂದಿನ ವರ್ಷ ಜಾತಿ ಗಣತಿ ಸಹಿತ ಜನಗಣತಿ ಮಾಡುತ್ತಿದೆ. ಹೀಗಿರುವಾಗ, ರಾಜ್ಯ ಸರ್ಕಾರದಿಂದ ಸಮೀಕ್ಷೆ ನಡೆಸುವುದನ್ನು ದುಂಡು ಮೇಜಿನ ಸಭೆ ಪ್ರಶ್ನಿಸಿದೆ ಎಂದು ಹೇಳಿದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ಸಮೀಕ್ಷೆ ಒಳ್ಳೆಯ ರೀತಿಯಲ್ಲಿ ಆಗಬೇಕಿರುವುದು ಅತ್ಯಂತ ಅವಶ್ಯಕ. ಹೀಗಾಗಿ, ಈ ಸಮೀಕ್ಷೆ ಜನರ ಕಲ್ಯಾಣದ ದೃಷ್ಟಿಕೋನ ಹೊಂದಿರಬೇಕಿತ್ತು. ಆದರೆ ಹಿಂದೂ ಚೌಕಟ್ಟು, ಭಾರತೀಯ ಸಂಸ್ಕೃತಿಯನ್ನು ಒಡೆಯಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿವೆ. ಅದಕ್ಕೆ ಜಾತಿಗಣತಿಯ ಮೂಲಕ ವೇದಿಕೆ ನೀಡಲಾಗುತ್ತಿದೆ. ಇದರ ವಿರುದ್ಧ ಎಲ್ಲರೂ ಸಂಘಟಿತವಾಗಿ ಹೋರಾಡಬೇಕು. ಹಿಂದೂ ಜಾತಿ ಜೊತೆಗೆ ಕ್ರಿಶ್ಚಿಯನ್ ಪದ ಸೇರಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಮಹೇಶ್ ಮಾತನಾಡಿ, ಇತ್ತೀಚೆಗಷ್ಟೇ ಒಳಮೀಸಲಾತಿ ಕುರಿತಾಗಿ ಎಸ್ಸಿ ಸಮುದಾಯದ ಸಮೀಕ್ಷೆ ನಡೆಸಲಾಗಿದೆ. ಈಗ ಮತ್ತೊಮ್ಮೆ ಅವರನ್ನು ಸಮೀಕ್ಷೆಗೆ ಒಳಪಡಿಸುವುದು ಯಾವ ಉದ್ದೇಶಕ್ಕೆ? ಈ ಸಮೀಕ್ಷೆಗೆ ಎಸ್ಸಿ-ಎಸ್ಟಿ ಅಭಿವೃದ್ಧಿಗೆ ಮೀಸಲಿರುವ 100 ಕೋಟಿ ರು. ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, 420 ಕೋಟಿ ರು. ಖರ್ಚು ಮಾಡಿ ಕೇವಲ 15 ದಿನಗಳಲ್ಲಿ ಸಮೀಕ್ಷೆ ಮಾಡಲು ಹೇಗೆ ಸಾಧ್ಯ? ಇದು ವೈಜ್ಞಾನಿಕ ಸಮೀಕ್ಷೆ ಎನಿಸಿಕೊಳ್ಳುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಲಕ್ಷ್ಮೀನಾರಾಯಣ್, ವಿಶ್ರಾಂತ ಕುಲಪತಿಗಳು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಸೇರಿದಂತೆ ಅನೇಕರು ಮಾತನಾಡಿದರು.

-ಬಾಕ್ಸ್‌-

ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ನಿಯೋಗ

ಸಭೆ ಬಳಿಕ ಸಂಸದ ಯದುವೀರ್ ಒಡೆಯರ್ ನೇತೃತ್ವದ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರನ್ನು ಭೇಟಿ ಮಾಡಿ, ಸಮೀಕ್ಷೆ ಕುರಿತಾಗಿ ಇರುವ ಆಕ್ಷೇಪಗಳು, ಕಳಕಳಿಯನ್ನು ಒಳಗೊಂಡಿರುವ 2 ಪುಟಗಳ ಮನವಿ ಪತ್ರವನ್ನು ಸಲ್ಲಿಸಿತು.

ಕೇಂದ್ರ ಸರ್ಕಾರ 202-27ರಲ್ಲಿ ಜಾತಿಗಣತಿ ಸಹಿತ ವ್ಯವಸ್ಥಿತ, ಪಾರದರ್ಶಕ, ವಿಶ್ವಾಸಾರ್ಹ ಜನಗಣತಿ ಕಾರ್ಯ ಮಾಡುತ್ತಿದೆ. ಆ ಪ್ರಕಾರವೇ ಮುಂದುವರೆಯುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವಂತೆ ರಾಜ್ಯಪಾಲರಿಗೆ ಪತ್ರದಲ್ಲಿ ಕೋರಲಾಗಿದೆ.

-ಬಾಕ್ಸ್‌-

ಪ್ರಮುಖ ನಿರ್ಣಯಗಳು

- 46 ಹಿಂದೂ ಉಪಜಾತಿವಾಚಕ ಶಬ್ದ ಇರುವ ಕ್ರಿಶ್ಚಿಯನ್ ಪದವನ್ನು ಪಟ್ಟಿಯಿಂದ ಬಿಡಬೇಕು. ಉಪಜಾತಿ ಕೋಡ್ ವಾಪಸ್ ಪಡೆಯಬೇಕು.

- ಹಿಂದೂ ಧರ್ಮದಿಂದ ಮತಾಂತರಗೊಂಡವರಿಗೆ ಮೀಸಲಾತಿ ಸೌಲಭ್ಯವಿಲ್ಲ ಎಂದು ಮುಖ್ಯಮಂತ್ರಿಯವರು ಘೋಷಿಸಬೇಕು.

- ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಪದ ಬಳಕೆ ಆಕ್ಷೇಪಿಸಿ ಹೈಕೋರ್ಟ್ ಮೊರೆ ಹೋಗಲು ನಿರ್ಧಾರ.

- 15 ದಿನಗಳಲ್ಲಿ ತರಾತುರಿಯಲ್ಲಿ ಸಮೀಕ್ಷೆ ಪೂರ್ಣ ಅಸಾಧ್ಯ. ಇದರಿಂದ ಸಂಗ್ರಹಿಸುವ ಮಾಹಿತಿ ವಿಶ್ವಾಸಾರ್ಹವಾಗಿರುವುದಿಲ್ಲ. ಬೇಸಿಗೆಯಲ್ಲಿ ಸಮೀಕ್ಷೆ ನಡೆಸಬೇಕು.

-ಬಾಕ್ಸ್‌-

ಸಮೀಕ್ಷೆ ಕುರಿತು ಸಭೆಯಲ್ಲಿ ಎತ್ತಿರುವ ಪ್ರಶ್ನೆಗಳು, ಆಕ್ಷೇಪಗಳು

- ಶೇ.17ರಷ್ಟು ಜನಸಂಖ್ಯೆಯನ್ನು ಕವರ್ ಮಾಡಲು (ಬೆಂಗಳೂರಲ್ಲಿ ಶೇ.57ರಷ್ಟು) ನಾಗಮೋಹನ್ ದಾಸ್ ಸಮಿತಿ 2 ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿದೆ. ಇಡೀ ರಾಜ್ಯವನ್ನು 15 ದಿನಗಳಲ್ಲಿ ಕವರ್ ಮಾಡಲು ಸಾಧ್ಯವೇ?

- ಇತ್ತೀಚೆಗೆ ರಾಜ್ಯ ಸರ್ಕಾರ ಎಸ್ಸಿ ಸಮೀಕ್ಷೆಗೆ 115 ಕೋಟಿ ರು. ಖರ್ಚು ಮಾಡಿತ್ತು. ಮತ್ತೆ ಅದೇ ಪ್ರಕ್ರಿಯೆಯಿಂದ ಸಾರ್ವಜನಿಕರ ಹಣ ಪೋಲಾಗುವುದಿಲ್ಲವೇ?

- ಸಮೀಕ್ಷೆ ಪ್ರಶ್ನಾವಳಿ ಅನಗತ್ಯವಾಗಿ ಸುಧೀರ್ಘವಾಗಿದೆ ಮತ್ತು ಸಂಕೀರ್ಣವಾಗಿದೆ. ಇದರಿಂದ ತಪ್ಪು ಮತ್ತು ಕೃತಕ ಪ್ರತಿಕ್ರಿಯೆಗಳಿಗೆ ಪ್ರೋತ್ಸಾಹಿಸಿದಂತಾಗುವುದಿಲ್ಲವೇ?

- ಹಿಂದಿನ ಸಮೀಕ್ಷೆಗಳಲ್ಲಿ ಇಲ್ಲದ ಕುಂಬಾರ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಮತ್ತಿತರ 46 ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಸೇರಿಸಿರುವ ಹಿಂದೆ ಸರ್ಕಾರದ ಉದ್ದೇಶವೇನಿದೆ?

- ಸಮೀಕ್ಷೆಯಲ್ಲಿ ಮುಸ್ಲಿಮರ ಜಾತಿ ಸೇರ್ಪಡೆ ಕುರಿತು ವ್ಯತಿರಿಕ್ತ ಅಭಿಪ್ರಾಯವಿದೆ. ಕಾಂತರಾಜು ಆಯೋಗದ ಪ್ರಕಾರ, ಕೆಟಗರಿ 1 ಮತ್ತು 2ಬಿ ಯಲ್ಲಿ 19 ಜಾತಿಗಳಿದ್ದರೆ, ಜಯಪ್ರಕಾಶ ಹೆಗ್ಡೆ ಆಯೋಗದ ಪ್ರಕಾರ 99 ಜಾತಿಗಳಿಗೆ. ಇಂತಹ ಅಸಮಂಜಸ ಮಾಹಿತಿಯು, ಸಮೀಕ್ಷೆಯ ವಿಶ್ವಾಸಾರ್ಹತೆ ಪ್ರಶ್ನಿಸುವುದಿಲ್ಲವೇ?

- ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂ ಸೇರ್ಪಡೆಗೆ ಕಾರಣವೇನು ಎಂಬುದಕ್ಕೆ ಸಮರ್ಥನೆಯೇ ಇಲ್ಲವಲ್ಲ.

- ಕಾಂತರಾಜು ಆಯೋಗದ ವರದಿ ತಿರಸ್ಕರಿಸಿದ್ದೇಕೆ? ಜಯಪ್ರಕಾಶ್ ಹೆಗ್ಡೆ ವರದಿಯಲ್ಲಿನ ಲೋಪಗಳನ್ನು ಸರಿಪಡಿಸದೆ ಮತ್ತೊಂದು ಸಮೀಕ್ಷೆಗೆ ಮುಂದಾಗಿರುವುದು ಕಣ್ಣೊರೆಸುವ ತಂತ್ರವೇ?

- ವಲಸಿಗರು ಹಾಗೂ ನುಸುಳುಕೋರರು ಆಧಾರ್ ಸಂಖ್ಯೆ ಹೊಂದಿದ್ದು, ಸಮೀಕ್ಷೆಯಲ್ಲಿ ಅವರು ಸೇರ್ಪಡೆಯಾಗುವುದು ಕಳವಳಕಾರಿ. 20ಕ್ಕೂ ಹೆಚ್ಚು ಜನರು ಇರುವ ಅಕ್ರಮ ನುಸುಳುಕೋರರಿಂದ ಡೆಟಾ ತಿರುಚುವ ಸಾಧ್ಯತೆ ಇದೆ. ಈ ವಿಷಯವನ್ನು ನಿರ್ಲಕ್ಷ್ಯಿಸುವಂತಿಲ್ಲ.

- ರಾಜಕೀಯ ಸ್ಪರ್ಧೆಯಿಂದ ಸಮುದಾಯಗಳು ಸುಳ್ಳು ಮಾಹಿತಿ ನಮೂದಿಸಲು ಉತ್ತೇಜಿಸಬಹುದು. ಇದನ್ನು ತಡೆಗಟ್ಟುವ ಅಂಶಗಳು ಇಲ್ಲ.

- ಜಿಲ್ಲೆ, ತಾಲೂಕು ಸೇರಿದಂತೆ ವಿವಿಧ ಹಂತಗಳಲ್ಲಿ ಸಮೀಕ್ಷೆಯ ಕುರಿತಾದ ಚರ್ಚೆಗಳನ್ನು ಆಯೋಜಿಸಬೇಕು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ