ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಭೇಟಿಗೆ ವಿರೋಧ

KannadaprabhaNewsNetwork |  
Published : Apr 22, 2025, 01:53 AM IST
21ಕೆಎಂಎನ್ ಡಿ15 | Kannada Prabha

ಸಾರಾಂಶ

ಅಮೆರಿಕಾದಲ್ಲಿ ಶೇ.70 ರಷ್ಟು ಮಾರುಕಟ್ಟೆ ಹೊಂದಿದ್ದ ಚೀನಾ, ಕೆನಡಾ, ಮೆಕ್ಸಿಕೋ ಮುಂತಾದ ದೇಶಗಳು ಆ ದೇಶದ ಸುಂಕ ಸಮರದ ಬೆದರಿಕೆಗೆ ತಿರುಗೇಟು ನೀಡಿವೆ. ಆದರೆ, ಅಮೆರಿಕಾದ ಜೊತೆ ವ್ಯಾಪಾರದ ಕೊರತೆ ಇರುವ ಭಾರತ ಇಂತಹ ದಿಟ್ಟ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಭೇಟಿ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿ ಕರೆ ಮೇರೆಗೆ ಕೆಎಸ್‌ಆರ್‌ಸಿ ಬಸ್ ನಿಲ್ದಾಣದ ಎದುರು ಸೇರಿದ ಕಾರ್ಯಕರ್ತರು ಅಮೆರಿಕಾ ದೇಶದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿರುದ್ಧ ಘೋಷಣೆ ಕೂಗಿ ಭಾರತವು ಮಾರಾಟಕ್ಕಿಲ್ಲ ಎಂಬ ಸಂದೇಶ ಸಾರಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್‌.ಎಲ್.ಭರತ್‌ರಾಜ್ ಮಾತನಾಡಿ, ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದ ಬೆದರಿಕೆ ಮೂಲಕ ಭಾರತದ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮಾರುಕಟ್ಟೆಯನ್ನು ಅಮೆರಿಕಾ ದೇಶದ ಉತ್ಪನ್ನಗಳಿಗೆ ಸುಂಕ ರಹಿತವಾಗಿ ಮುಕ್ತಗೊಳಿಸುವಂತೆ ಒತ್ತಡ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಆದೇಶದ ಉಪಾಧ್ಯಕ್ಷರ ಭೇಟಿ ಮತ್ತು ವಾಣಿಜ್ಯ ಮಾತುಕತೆಯಿಂದ ಭಾರತದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಎಂದು ಎಚ್ಚರಿಸಿದರು.

ಅಮೆರಿಕಾದಲ್ಲಿ ಶೇ.70 ರಷ್ಟು ಮಾರುಕಟ್ಟೆ ಹೊಂದಿದ್ದ ಚೀನಾ, ಕೆನಡಾ, ಮೆಕ್ಸಿಕೋ ಮುಂತಾದ ದೇಶಗಳು ಆ ದೇಶದ ಸುಂಕ ಸಮರದ ಬೆದರಿಕೆಗೆ ತಿರುಗೇಟು ನೀಡಿವೆ. ಆದರೆ, ಅಮೆರಿಕಾದ ಜೊತೆ ವ್ಯಾಪಾರದ ಕೊರತೆ ಇರುವ ಭಾರತ ಇಂತಹ ದಿಟ್ಟ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೇ ಭಾರತವನ್ನು ಸುಂಕ ರಾಜ ಎಂದು ಡೋನಾಲ್ಡ್ ಟ್ರಂಪ್ ಅಣಕಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಭಾರತದ ವಲಸೆ ಕಾರ್ಮಿಕರನ್ನು ಕೋಳ ತೊಡಿಸಿ ಅಮಾನವೀಯವಾಗಿ ನಡೆಸಿಕೊಂಡಾಗಲೂ ಸೂಕ್ತ ಪ್ರತಿಭಟನೆ ವ್ಯಕ್ತಪಡಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಅಮೆರಿಕಾದ ಸುಂಕ ಸಮರದಿಂದ ಉಂಟಾಗುವ ಪರಿಸ್ಥಿತಿ ನಿಭಾಯಿಸಲು ಕೂಡಲೇ ಸಂಸತ್ತು ಹಾಗೂ ಶಾಸನ ಸಭೆಗಳಲ್ಲಿ ಚರ್ಚಿಸಿ ಸೂಕ್ತ ಮಾರ್ಗಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಪ್ರಾಧಾನ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಗುರುಸ್ವಾಮಿ, ಮಹಾದೇವು, ಹಿಪ್ಜೂಲ್ಲಾ, ಶಿವಕುಮಾರ್, ಚಿಕ್ಕಸ್ವಾಮಿ ಚಿಕ್ಕಮೊಗಣ್ಣ, ಸಿದ್ದರಾಜ್, ನಾಗಮ್ಮ, ಜಮೂನ, ನಂಜುಂಡಸ್ವಾಮಿ, ಚನ್ನಬಸಪ್ಪ, ಶಿವು, ಕರಿಯಪ್ಪ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ