ಕನ್ನಡಪ್ರಭ ವಾರ್ತೆ ಶಿವಮೊಗ್ಗ
2026-27ರಂದು ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಶೇ. 24.1 ರಷ್ಟು ಅನುದಾನ ಮೀಸಲಿರಿಸಬೇಕು ಹಾಗೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಸೆಕ್ಷನ್ ೭(ಅ) ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನಾಕಾರರು ಆರೋಪಿಸಿದಂತೆ, ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ಮೀಸಲಾದ ಸುಮಾರು 42 ಸಾವಿರ ಕೋಟಿ ರು.ಗಳಲ್ಲಿ 25 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯದ ವಿರುದ್ಧ ನಡೆದುಕೊಂಡಿದೆ ಎಂದು ದೂರಿದರು.ಕಾಯ್ದೆಯ ಪ್ರಕಾರ ಎಸ್ಸಿ ಸಮುದಾಯಕ್ಕೆ ಶೇ. 17.15 ಮತ್ತು ಎಸ್ಟಿ ಸಮುದಾಯಕ್ಕೆ ಶೇ. 6.95 ಅನುದಾನ ವ್ಯಯಿಸಬೇಕು. ಇದರ ಜೊತೆಗೆ ಅರಣ್ಯಾಧಾರಿತ ಆದಿವಾಸಿ ಕುಟುಂಬಗಳಿಗೆ ವಸತಿ ಸೌಲಭ್ಯ, ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಮಾಸಿಕ 5 ಸಾವಿರ ರು. ನೆರವು, ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣದಲ್ಲಿ ಕ್ರಮ, ಬಗರ್ ಹುಕುಂ ಸಾಗುವಳಿದಾರರಿಗೆ ಭೂಹಕ್ಕು ಪತ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳನ್ನು ವಸತಿ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಭೋಜನ ವೆಚ್ಚ 3000 ರು. ವರೆಗೆ ಹೆಚ್ಚಳ ಮಾಡಬೇಕು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಏಳುಕೋಟಿ, ಪ್ರಮುಖರಾದ ಶಿವಬಸಪ್ಪ, ಹರಿಗೆ ರವಿ, ಚಂದ್ರಪ್ಪ ಜೋಗಿ, ಕೃಷ್ಣ ಬೊಮ್ಮನಕಟ್ಟೆ, ಎಂ. ರಮೇಶ್ ಚಿಕ್ಕಮರಡಿ, ನಾಗರಾಜ್ ಕಾಚಗೊಂಡನಹಳ್ಳಿ, ಜಗದೀಶ್ ಚರ್ಚಿಗುಂಡಿ, ಬಸವರಾಜ್ ಹಸ್ವಿ, ನಾಗರಾಜ್, ಯಡವಾಲ ಹನುಮಂತಪ್ಪ, ಮನ್ಸೂರ್ ಲಕ್ಕವಳ್ಳಿ, ಚೇತನ್‌ಕುಮಾರ್ ಹಸೂಡಿ ಮತ್ತಿತರರು ಇದ್ದರು.