ಕನ್ನಡಪ್ರಭ ವಾರ್ತೆ ರಾಯಚೂರು
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೀಡಿದ ಹೋರಾಟದ ಕರೆ ಹಿನ್ನೆಲೆಯಲ್ಲಿ ನಗರದ ಎಲ್ಲ ಮಸ್ಜೀದ್‌ಗಳ ಎದುರು ಪ್ರತಿಭಟಿಸಲಾಯಿತು. ಸರ್ಕಾರದ ವಕ್ಫ ಆಸ್ತಿಗಳನ್ನು ರಕ್ಷಣೆ ಮಾಡುವ ಬದಲಾಗಿ ಅಕ್ರಮ ಒತ್ತುವರಿದಾರರ ಪರವಾಗಿ ಕಾನೂನು ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ದೇಶದ ಎಲ್ಲಾ ಭಾಗಗಳಲ್ಲಿ ವಿವಿಧ ಹಂತದಲ್ಲಿ ಹೋರಾಟಗಳನ್ನು ಮಾಡಲಾಗುತ್ತಿದೆ ಎಂದು ಮುಖಂಡರು ತಿಳಿಸಿದರು.
ಒಂದು ಕಡೆ ಅಖಿಲಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾನೂನು ಹೋರಾಟ ನಡೆಸುತ್ತಿದೆ, ಸುಪ್ರೀಂಕೋರ್ಟ್ ನಲ್ಲಿ ದಾವೆ ಹಾಕಲಾಗಿದೆ, ಸುಪ್ರೀಂ ಕೋರ್ಟ್ ಸರಕಾರ ತಿದ್ದುಪಡಿ ಮಾಡಲಾದ ಅಂಶಗಳಲ್ಲಿ ಮೂರು ಅಂಶಗಳ ಜಾರಿಗೆ ತಡೆಯಾಜ್ಞೆ ನೀಡಿದೆ, ಇನ್ನುಳಿದ ಅಂಶಗಳ ಕುರಿತು ಚರ್ಚೆ ನಡೆಯುತ್ತಿದೆ.ವಕ್ಫ್ ತಿದ್ದುಪಡಿ ಕಾಯ್ದೆ-2025 ಜಾರಿಯ ನಂತರ ದೇಶದಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ ಕಷ್ಟವಾಗುತ್ತದೆ, ಕೇಂದ್ರ ಸರಕಾರ ವಕ್ಫ್ ಆಸ್ತಿಗಳನ್ನು ಬಳಸಿ ಅರಾಜಕತೆ ಸೃಷ್ಟಿಗೆ ದಾರಿ ಮಾಡಿಕೊಡಲು ಮುಂದಾಗಿರುವುದು ದುರದೃಷ್ಟಕರ ಎಂದು ಪ್ರತಿಭಟನಾನಿರತರು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಆಸೀಮುದ್ದೀನ ಅಕ್ತರ್, ಡಾ.ರಝಾಕ ಉಸ್ತಾದ, ಮೊಹಮ್ಮದ ಉಸ್ಮಾನ, ಏಜಾಜ್ ಅಲಿ, ಸೈಯದ ಅಮೀನುಲ್ ಹಸನ್, ಅಕ್ತರ್ ಹುಸೇನ, ಶೆಖ ಮಾಸೂಮ್, ಮೌಲಾನಾ ಜಮೀಲ್ ಸಿರಾಜಿ, ಜಹೀರುದ್ದೀನ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು