ವಿಧಾನಮಂಡಲ : ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಯಾವ ಮಾನದಂಡಗಳ ಮೇಲೆ ಪ್ರವರ್ಗಗಳ ವರ್ಗೀಕರಣ ಮಾಡಿದೆ ಎಂಬ ಕುರಿತು ಚರ್ಚೆಗೆ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದಿದ್ದು, ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಪರಿಷತ್‌ನಲ್ಲೂ ಒಳ ಮೀಸಲಾತಿ ಕುರಿತು ಸ್ಪಷ್ಟನೆ ಕೇಳಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ಗದ್ದಲ ಸೃಷ್ಟಿಸಿದರು. ಪರಿಣಾಮ ಉಭಯ ಸದಸ್ಯರ ನಡುವೆ ವಾಗ್ವಾದ, ಏಕ ವಚನ, ಧಮ್-ತಾಕತ್ತು ಪದ ಪ್ರಯೋಗ ನಡೆದಿದ್ದು, ಗದ್ದಲದ ನಡುವೆ ಕೆಲ ಕಾಲ ಕಲಾಪ ಮುಂದೂಡಿದ ಪ್ರಸಂಗವೂ ನಡೆಯಿತು.
ಮೊದಲಿಗೆ ವಿಧಾನಸಭೆಯಲ್ಲಿ ಸಚಿವ ಸಂಪುಟ ಸಭೆಯ ನಿರ್ಧಾರದ ಕುರಿತು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದರು.
ಇದರ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ ಬೆಲ್ಲದ್, ಬಿಜೆಪಿ ಸದಸ್ಯ ವಿಜಯೇಂದ್ರ ಅವರು, ಒಳ ಮೀಸಲಾತಿ ಜಾರಿ ನಿರ್ಧಾರದ ಹೇಳಿಕೆ ರಾಜಕೀಯ ಹೇಳಿಕೆ. ಈ ಮೀಸಲಾತಿ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಸಭಾಧ್ಯಕ್ಷ ಯು.ಟಿ. ಖಾದರ್, ‘ಹೇಳಿಕೆ ಮೇಲೆ ಚರ್ಚೆಗೆ ನಿಯಮಗಳಲ್ಲಿ ಅವಕಾಶವಿಲ್ಲ’ ಎಂದು ಅವಕಾಶ ನಿರಾಕರಿಸಿದರು.
ಇದಕ್ಕೆ ಬಿಜೆಪಿ ಸದಸ್ಯ ಸುನಿಲ್‌ಕುಮಾರ್, ‘ಚರ್ಚೆಗೆ ಅವಕಾಶವಿಲ್ಲ. ಆದರೆ ಪ್ರಶ್ನೆಗಳು ಕೇಳಿದರೆ ಅವಕಾಶ ನೀಡಬಹುದು’ ಎಂದು ನಿಯಮದಲ್ಲಿದೆ ಎಂದರು.
ಆಗ ಸಭಾಧ್ಯಕ್ಷರು, ‘ನೀಡಬಹುದು ಎಂದಿದೆ ನೀಡಬೇಕು ಎಂದಿಲ್ಲ. ಬೇಕಿದ್ದರೆ ಗುರುವಾರ ಚರ್ಚೆ ಮಾಡಿ’ ಎಂದು ಹೇಳಿ ಅನುಮತಿ ನಿರಾಕರಿಸಿದರು.
ಧೈರ್ಯವಿದ್ದರೆ ಚರ್ಚೆಗೆ ಅವಕಾಶ ನೀಡಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೀವು ಮಾಡಲಾಗಲಿಲ್ಲ. ನಾವು ಮಾಡಿದ್ದೇವೆ. ಎಲ್ಲಾ ಜಾತಿಗಳೂ ಒಪ್ಪುವಂತೆ ಮಾಡಿದ್ದೇವೆ ಎಂದಷ್ಟೇ ಹೇಳಿ ಚರ್ಚೆಗೆ ನಿರಾಕರಿಸಿದರು. ಜತೆಗೆ ವಿಧಾನಪರಿಷತ್‌ನಲ್ಲಿ ಹೇಳಿಕೆ ನೀಡಲು ಹೊರಟು ನಿಂತಿದ್ದರು.
ಇದಕ್ಕೆ ಆರ್. ಅಶೋಕ್, ಅರವಿಂದ್ ಬೆಲ್ಲದ್, ‘ಎಲ್ಲಾ ಜಾತಿಗಳು ಒಪ್ಪುವಂತೆ ಮಾಡಿದ್ದರೆ ಹೆದರಿಕೆ ಯಾಕೆ? ಯಾಕೆ ಓಡಿ ಹೋಗುತ್ತೀರಾ?’ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ, ‘ನಾನೆಂದೂ ಭಯ ಪಡುವ ವ್ಯಕ್ತಿಯಲ್ಲ. ನಿಮ್ಮ ಕಂಡರಂತೂ ಭಯವೇ ಇಲ್ಲ’ ಎಂದು ಹೇಳಿ ಹೊರಟು ಹೋದರು.
ಬಳಿಕ ಬಿ.ವೈ. ವಿಜಯೇಂದ್ರ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಒಳ ಮೀಸಲಾತಿ ಜಾರಿಗೆ ತರಲಾಗಿತ್ತು. ಆಗ ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಆಗಿನ ತೀರ್ಮಾನಕ್ಕೂ ಇದಕ್ಕೂ ವ್ಯತ್ಯಾಸವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಕೊನೆಗೂ ಸ್ಪೀಕರ್ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಭಾತ್ಯಾಗ ಮಾಡಿದರು.
ಪರಿಷತ್‌ನಲ್ಲೂ ಗದ್ದಲ:
ಬಳಿಕ ಪರಿಷತ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ನಿರ್ಣಯ ಕುರಿತು ಹೇಳಿಕೆ ನೀಡಿದರು. ಈ ವೇಳೆ ಪ್ರತಿಪಕ್ಷ ಸದಸ್ಯರು, ‘ಚುನಾವಣೆ ವೇಳೆ ಎಸ್ಸಿ ಸಮುದಾಯಕ್ಕೆ ಶೇ.17ರಷ್ಟು ಮೀಸಲಾತಿ ಇಲ್ಲ ಎಂದಿದ್ದ ಕಾಂಗ್ರೆಸ್ ಈಗ ಹೇಗೆ ಜಾರಿ ಮಾಡಿತು? ಯಾವ ಆಯೋಗದ ವರದಿ ಮೇಲೆ ಇದನ್ನು ಜಾರಿ ಮಾಡಲಾಗಿದೆ?’ ಎಂದು ಪ್ರಶ್ನಿಸಿದರು.
ಇದಕ್ಕೆ ಸಿದ್ದರಾಮಯ್ಯ ಅವರು, ಇದು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರ. ಸದನ ನಡೆಯುತ್ತಿರುವುದರಿಂದ ಈ ನಿರ್ಧಾರವನ್ನು ಮಂಗಳವಾರ ಮಾಧ್ಯಮಗಳಿಗೆ ಹೇಳಿರಲಿಲ್ಲ. ಸದನದ ಗಮನಕ್ಕೆ ತರಬೇಕು ಎನ್ನುವ ಕಾರಣಕ್ಕೆ ತಂದಿದ್ದೇನೆ. ಇದು ಸರ್ಕಾರದ ಹೇಳಿಕೆ ಅಷ್ಟೆ. ಹಾಗಾಗಿ ಚರ್ಚೆ, ಸ್ಪಷ್ಟನೆಗೆ ಅವಕಾಶವಿಲ್ಲ ಎಂದು ನಿರಾಕರಿಸಿದರು.
ಈ ವೇಳೆ, ವಸತಿ ಸಚಿವ ಜಮೀರ್ ಅಹಮದ್ ಒಳಮೀಸಲಾತಿ ತರುವ ತಾಕತ್ತು-ಧಮ್ಮು ನಿಮಗೆ ಇರಲಿಲ್ಲ, ನಮಗೆ ಇತ್ತು ನಾವು ತಂದಿದ್ದೇವೆ ಎಂದು ಛೇಡಿಸಿದರು.
ಸಭಾನಾಯಕ ಬೋಸರಾಜು, ಎಸ್ಸಿ ಸಮುದಾಯವೇ ಒಪ್ಪಿರುವಾಗ ನೀವು ರಾಜಕೀಯ ಮಾಡುತ್ತಿರುವುದಕ್ಕೆ ನಾಚಿಕೆ ಆಗಬೇಕು ಎಂದು ಕುಟುಕಿದರು.
ಸಚಿವರ ಮಾತುಗಳಿಗೆ ಸಿಡಿಮಿಡಿಗೊಂಡ ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್, ಸಿ.ಟಿ.ರವಿ ಮತ್ತಿತರ ಬಿಜೆಪಿ ಸದಸ್ಯರು ಸಚಿವರು ಆಡುವ ಮಾತಾ ಇದು. ಕ್ಷಮೆ ಕೇಳಬೇಕು, ಕಡತದಿಂದ ತೆಗೆಸಬೇಕೆಂದು ಆಗ್ರಹಿಸಿದರು.
ಬಸರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸದನದಲ್ಲಿ ಈ ಪದ ಬಳಸಿಲ್ಲವೇ? ಆಗೇಕೆ ಸುಮ್ಮನಿದ್ದಿರಿ ಎಂದು ಸಚಿವ ಸುರೇಶ್ ಪ್ರಶ್ನಿಸಿದರಲ್ಲದೆ, ಏಕವಚನ ಪ್ರಯೋಗ ಮಾಡಿದರು.
ಇದರಿಂದ ಇನ್ನಷ್ಟು ಕೆರಳಿದ ಪ್ರತಿಪಕ್ಷ ಸದಸ್ಯರು, ಇದು ಸರ್ಕಾರದ ಸರ್ವಾಧಿಕಾರಿ ಧೋರಣೆ, ಸಭಾಪತಿ ಅವರು ನಮ್ಮ ರಕ್ಷಣೆಗೆ ಬರಬೇಕು. ಈ ಮಾಹಿತಿ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸ್ಪಷ್ಟನೆ ಕೇಳಲು ನಿಯಮದಲ್ಲಿ ಅವಕಾಶವಿದೆ ಎಂದು ಕ್ರಿಯಾಲೋಪ ಎತ್ತಲು ಮುಂದಾದರು. ಆಗ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಯವರೇ ಸ್ಪಷ್ಟನೆ ನೀಡಲು ಒಪ್ಪದಿದ್ದಾಗ ನಾನು ಒತ್ತಾಯ ಮಾಡಲು ಬರುವುದಿಲ್ಲ ಎಂದು ರೂಲಿಂಗ್ ನೀಡಿದರು.
ಆದರೂ, ಸದನದಲ್ಲಿ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಸಭಾಪತಿ ಐದು ನಿಮಿಷ ಕಲಾಪ ಮುಂದೂಡಿದರು.ಒಳ ಮೀಸಲು ಸಿದ್ದು ಚಿತ್ರಕ್ಕೆ ಹಾಲಿನ ಅಭಿಷೇಕ:
ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾದಿಗ ಸಮುದಾಯ ಮತ್ತು ಚಾಮರಾಜನಗರದಲ್ಲಿ ಬಲಗೈ-ಎಡಗೈ ಸಮುದಾಯದವರು ಸಂಭ್ರಮಿಸಿದರು.ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ಮಾದಿಗ ಸಮುದಾಯದ ನಿಯೋಗ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಮುಖ್ಯಮಂತ್ರಿ ನಿವಾಸ ಕಾವೇರಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾದಿಗ ಸಮುದಾಯದವರು, ಸಿದ್ದರಾಮಯ್ಯ ಅವರ ಬೃಹತ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕದ ಜೊತೆ ಹೂವಿನ ಮಳೆ ಸುರಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ಸಿಎಂ ನಿವಾಸ ಪ್ರವೇಶಿಸಿದ ಆಂಜನೇಯ ಮತ್ತಿತರರು, ಸಿದ್ದರಾಮಯ್ಯ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.
ವಕೀಲ ರವೀಂದ್ರ, ಕೊಪ್ಪಳದ ಗುಳೇಪ್ಪ, ಕಲಬುರಗಿಯ ಶ್ಯಾಮ್ ನಾಟಿಕೇರ್, ಬೀದರ್‌ನ ಚಂದ್ರಕಾಂತ್ ಇಪ್ಪಾಳ್ಗ, ಹೊಸಕೋಟೆ ಸುಬ್ಬಣ್ಣ, ಮಹದೇವಪುರದ ಚಿಮ್ಮಿ, ಹಾಸನದ ಶಂಕರ್‌ರಾಜ್, ಚಿತ್ರದುರ್ಗ ಶರಣಪ್ಪ, ನರಸಿಂಹರಾಜ್, ಮಾಗಡಿ ಮಂಜೇಶ್, ಬೆಂಗಳೂರಿನ ಮುತ್ತುರಾಜ್, ರಾಯಚೂರಿನ ಶರಣು ಹಾಜರಿದ್ದರು.
ಇನ್ನು ಚಾಮರಾಜನಗರದಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಹೊಲೆಯ, ಮಾದಿಗ ಜನಾಂಗಗಳಿಗೆ ಶೇ.6ರಷ್ಟು ಹಾಗೂ ಇತರೇ ಸಮುದಾಯಕ್ಕೆ ಶೇ.5 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ ಕೊಟ್ಟಿದೆ ಎಂದು ಬಲಗೈ-ಎಡಗೈ ಎರಡೂ ಸಮುದಾಯಗಳ ಮುಖಂಡರು ಒಟ್ಟಿಗೆ ಸೇರಿ ವಿಜಯೋತ್ಸವ ಆಚರಿಸಿದರು.ಅನೇಕರು ಜಮಾಯಿಸಿ ರಾಜ್ಯ ಸರ್ಕಾರ ಹಾಗೂ ಡಾ। ಬಿ.ಆರ್.ಅಂಬೇಡ್ಕರ್ ಪರ ಘೋಷಣೆಗಳನ್ನು ಕೂಗಿ ಒಬ್ಬರಿಗೊಬ್ಬರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.