ಬ್ಲ್ಯಾಕ್ ಮೇಲ್ ಪತ್ರಕರ್ತರ ವಿರುದ್ಧ ಎಫ್ಐಆರ್‌ಗೆ ಆದೇಶ

KannadaprabhaNewsNetwork |  
Published : Aug 05, 2026, 01:30 AM IST
4ಕೆಡಿವಿಜಿ7, 8-ದಾವಣಗೆರೆ ಡಿಸಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಟ ಡಾ.ಎಚ್.ಟಿ.ಶೇಖರ್, ಜಿಪಂ ಸಿಇಓ ಗಿತ್ತೆ ಮಾಧವ ವಿಠಲರಾವ್ ಮಾತನಾಡಿದರು. | Kannada Prabha

ಸಾರಾಂಶ

ಮುದ್ರಣ ಮತ್ತು ದೃಶ್ಯ ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು, ಸಂಸ್ಥೆಗಳನ್ನು ಹೆದರಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಜಿಲ್ಲಾದ್ಯಂತ ತಕ್ಷಣದಿಂದಲೇ ಪ್ರೆಸ್ ಎಂಬುದಾಗಿ ಬರೆಸಿಕೊಂಡ ವಾಹನಗಳ ವಿರುದ್ಧವೂ ಐಎಂಎ ಕಾಯ್ದೆಯಡಿ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದ್ದಾರೆ.

- ಕೇಸ್ ದಾಖಲಿಸಿ ಸಂಸ್ಥೆ ಸಂಪಾದಕ, ಮಾಲೀಕರು, ಆಡಳಿತ ಮಂಡಳಿಗೂ ಜಂಟಿ ಪತ್ರದ ರವಾನೆ - ಮುದ್ರಣ-ದೃಶ್ಯ ಮಾಧ್ಯಮದ ಹೆಸರು ದುರ್ಬಳಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ: ಡಿಸಿ, ಎಸ್‌ಪಿ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುದ್ರಣ ಮತ್ತು ದೃಶ್ಯ ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು, ಸಂಸ್ಥೆಗಳನ್ನು ಹೆದರಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಜಿಲ್ಲಾದ್ಯಂತ ತಕ್ಷಣದಿಂದಲೇ ಪ್ರೆಸ್ ಎಂಬುದಾಗಿ ಬರೆಸಿಕೊಂಡ ವಾಹನಗಳ ವಿರುದ್ಧವೂ ಐಎಂಎ ಕಾಯ್ದೆಯಡಿ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ನಡೆದ ಮೊದಲ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪತ್ರಕರ್ತರೆಂದು ಹೇಳಿಕೊಂಡು ಅಕ್ರಮವಾಗಿ ಹಣ ವಸೂಲಿ ಮಾಡುವುದು, ಬೆದರಿಕೆ ಹಾಕುವುದು, ಬ್ಲ್ಯಾಕ್ ಮೇಲ್‌ ಮಾಡುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇನ್ನು ಇಂತಹದ್ದಕ್ಕೆಲ್ಲಾ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅವಕಾಶ ನೀಡುವುದಿಲ್ಲ ಎಂದರು.

ಮರಳು ದಂಧೆಕೋರರಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳವರೆಗೆ ಬೆದರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಮಾಧ್ಯಮದ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಅಥವಾ ಅಕ್ರಮ ಹಣ ವಸೂಲಿಯಲ್ಲಿ ತೊಡಗುವ ಯಾವುದೇ ನಕಲಿ ಪತ್ರಕರ್ತರು, ಯಾವುದೇ ಪತ್ರಿಕೆ- ದೃಶ್ಯ ಮಾಧ್ಯಮದವರಾಗಿದ್ದರೂ ಎಫ್ಐಆರ್‌ ದಾಖಲಿಸಲು ಪೊಲೀಸ್ ಇಲಾಖೆಗೆ ಸ್ಪಷ್ಟವಾಗಿ ಸೂಚಿಸಿದ್ದೇವೆ. ಡಿಸಿ, ಎಸ್ಪಿ, ಸಿಇಒ ಜಂಟಿಯಾಗಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ. ಅಲ್ಲದೇ, ಅಂತಹವರ ಪತ್ರಿಕೆ ಸಂಪಾದಕರು, ಸುದ್ದಿವಾಹಿನಿ ಸಂಪಾದಕರು, ಮಾಲೀಕರಿಗೆ ಜಂಟಿ ಪತ್ರ ರವಾನಿಸುತ್ತೇವೆ ಎಂದು ಅವರು ಹೇಳಿದರು.

ಗ್ರಾಮೀಣ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಕಿರುಕುಳ ತಪ್ಪಿಸಲು ಆಯಾ ಇಲಾಖೆಗಲಿಗೆ ಹಾಗೂ ಪಂಚಾಯಿತಿಗಳಿಗೆ ಅಧಿಕೃತ ಮಾಧ್ಯಮ ಪ್ರತಿನಿಧಿಗಳ ಪಟ್ಟಿ ಒದಗಿಸುತ್ತೇವೆ. ಅಧಿಕಾರಿಗಳಿಗೆ ರಾತ್ರಿವೇಳೆ ಕರೆ ಮಾಡಿ ಬೆದರಿಸುವುದು, ಸರ್ಕಾರಿ ಕಚೇರಿಯಲ್ಲಿ ವೀಡಿಯೋ ಮಾಡಿ, ಫೋಟೋ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡುವುದು ಕಂಡುಬಂದರೆ ತಕ್ಷಣ ಅಂತಹವರನ್ನು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಳ್ಳುತ್ತೇವೆ. ತಾಲೂಕೊಂದರಲ್ಲಿ ಸ್ವತಃ ತಾವೇ ಈಗಾಗಲೇ ಓರ್ವ ವ್ಯಕ್ತಿಯ ವಿರುದ್ಧ ಹೀಗೆ ಕೇಸ್ ಮಾಡಿಸಿದ್ದೇವೆ ಎಂದು ಅವರು ತಿಳಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಮಾಧ್ಯಮ ಕ್ಷೇತ್ರದ ಗೌರವ ಎತ್ತಿ ಹಿಡಿಯಲು ಇಂತಹ ಕ್ರಮ ಅನಿವಾರ್ಯವಾಗಿದೆ. ಜಿಲ್ಲಾಡಳಿತಕ್ಕೆ ಅಥವಾ ಸಾರ್ವಜನಿಕರಿಗೆ ಯಾವುದೇ ರೀತಿ ಯ ಕೆಟ್ಟ ಹೆಸರು ತರಲು ಪ್ರಯತ್ನಿಸಿದರೆ ಸಹಿಸುವುದಿಲ್ಲ. ಸರ್ಕಾರ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಸುತ್ತೋಲೆ ಪ್ರಕಾರ ಪ್ರತಿಯೊಬ್ಬ ಅಧಿಕಾರಿಯೂ ಮಾಧ್ಯಮಗಳಿಗೆ ನೇರವಾಗಿ ಎಲ್ಲ ವಿಷಯ ಹಂಚಿಕೊಳ್ಳಲು ಅ‍ವಕಾಶ ಇಲ್ಲ. ಕೇವಲ ಅಭಿವೃದ್ಧಿ ಕೆಲಸ, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಮಾತ್ರ ಅಧಿಕೃತವಾಗಿ ಹಂಚಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್‌, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯಪ್ಪ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ನಿಕಟಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಹಿರಿಯ ಪತ್ರಕರ್ತರಾದ ರಮೇಶ ಜಹಗೀರದಾರ್, ಡಾ. ಕೆ.ಜೈಮುನಿ, ಎಚ್.ಎಂ. ರಾಜಶೇಖರಯ್ಯ (ರಾಜೇಶ), ಎ.ಎನ್.ನಿಂಗಪ್ಪ, ಬಿ.ಸಿಕಂದರ್‌, ಮಹಾಂತೇಶ ಕುರಬೇಟ್, ಸಂಜಯ್ ಕುಂದುವಾಡ, ಕೆ.ಎನ್.ಮಲ್ಲಿಕಾರ್ಜುನ ಮೂರ್ತಿ, ಶಿವಮೂರ್ತಿ, ಕಿರಣಕುಮಾರ, ಲೋಕೇಶ, ರಮೇಶ ಇತರರು ಇದ್ದರು.

- - -

(ಬಾಕ್ಸ್‌)

* ನಗರ ಸೇರಿ ಜಿಲ್ಲಾದ್ಯಂತ ಕಾರ್ಯಾಚರಣೆ ಶುರು: ಎಸ್‌ಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್ ಮಾತನಾಡಿ, ಮಾಧ್ಯಮ ಕ್ಷೇತ್ರದ ಅಧಿಕೃತ, ಅನಧಿಕೃತ ವ್ಯಕ್ತಿಗಳ ಗೊಂದಲಕ್ಕೆ ತೆರೆ ಎಳೆಯಲು ಹಾಗೂ ಅನಧಿಕೃತ ವ್ಯಕ್ತಿಗಳಿಂದ ಮಾಧ್ಯಮದ ಹೆಸರು ದುರುಪಯೋಗ ತಡೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿವೆ. ನಕಲಿ ಅಥವಾ ಅನಧಿಕೃತ ಐಡಿ ಕಾರ್ಡ್‌ ಮತ್ತು ವಾಹನಗಳ ಮೇಲೆ ಪ್ರೆಸ್ ಅಂತಾ ಹಾಕಿಕೊಂಡ ವಾಹನಗಳ ಮೇಲೆ ಎಫ್ಐಆರ್‌ ದಾಖಲಿಸಿ, ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು. ಈ ಕಾರ್ಯಾಚರಣೆ ಮಂಗಳವಾರ (ಆ.4)ದಿಂದಲೇ ದಾವಣಗೆರೆ ನಗರ, ಜಿಲ್ಲಾದ್ಯಂತ ಶುರುವಾಗಿದೆ ಎಂದು ಎಚ್ಚರಿಸಿದರು.

ಫಿಂಗರ್ ಪ್ರಿಂಟ್ ಐಡಿ ಕಾರ್ಡ್‌ ನೀಡ್ತೀವಿ:

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅಧಿಕೃತ ಪತ್ರಕರ್ತರ ಪಟ್ಟಿಯನ್ನು ಪಡೆದು, ಫೋಟೋ ಮತ್ತು ಬೆರಳಚ್ಚು (ಫಿಂಗರ್ ಪ್ರಿಂಟ್) ಸಹಿತ ಹೊಸ ಐ.ಡಿ. ಕಾರ್ಡ್‌ಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹಿ ಸಮೇತ ಮುದ್ರಿಸಿ ನೀಡಲಾಗುವುದು. ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಇಲಾಖೆ ಮಾಹಿತಿಗಳು ಇನ್ನು ಮುಂದೆ ಲಭ್ಯವಾಗಲಿವೆ ಎಂದರು.

** PRESS ** ವಾಹನಗಳ ವಶ:

ಯಾವುದೇ ಅಧಿಕೃತ ರಹದಾರಿ ಇಲ್ಲದೇ ವಾಹನಗಳ ಮೇಲೆ ** PRESS ** ಅಥವಾ ** ಪತ್ರಕರ್ತ ** ಎಂಬುದಾಗಿ ಹಾಕಿಕೊಂಡು ತಿರುಗಾಡುವವರ ವಿರುದ್ಧವೂ ಪೊಲೀಸ್ ಇಲಾಖೆ ಐಎಂಎ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿ, ವಾಹನಗಳನ್ನು ವಶಕ್ಕೆ ಪಡೆಯಲಿದೆ. ** PRESS ** ಎಂಬುದಾಗಿರುವ ದ್ವಿಚಕ್ರ ವಾಹನ, ಲಘು ವಾಹನ ಸೇರಿದಂತೆ ಯಾವುದೇ ವಾಹನಗಳಿದ್ದರೂ ಇಂದಿನಿಂದಲೇ ಕಾರ್ಯಾಚರಣೆ ಶುರುವಾಗಲಿದೆ.

- ಡಾ. ಎಚ್.ಟಿ.ಶೇಖರ್, ಜಿಲ್ಲಾ ಎಸ್‌ಪಿ.

- - -

-4ಕೆಡಿವಿಜಿ7, 8:

ದಾವಣಗೆರೆ ಡಿಸಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಎಸ್‌ಪಿ ಡಾ. ಎಚ್.ಟಿ.ಶೇಖರ್, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ದಿನಾಚರಣೆ ಆಚರಣೆ ಕುರಿತು ಪೂರ್ವಭಾವಿ ಸಭೆ
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಕೆಆರ್‌ಎಸ್‌ ಪ್ರತಿಭಟನೆ