ಗಜೇಂದ್ರಗಡ ತಹಸೀಲ್ದಾರ್‌ ಕಾರ್ಯಾಲಯ ತಾತ್ಕಾಲಿಕ ಸ್ಥಳಾಂತರಕ್ಕೆ ಆದೇಶ

KannadaprabhaNewsNetwork |  
Published : Jun 18, 2025, 11:48 PM IST
ಗಜೇಂದ್ರಗಡ ಕಾಲಕಾಲೇಶ್ವರ ವೃತ್ತದಲ್ಲಿರುವ ತಹಸೀಲ್ದಾರ್ ಕಚೇರಿ. | Kannada Prabha

ಸಾರಾಂಶ

ಗಜೇಂದ್ರಗಡ ಪಟ್ಟಣದ ಹೃದಯ ಭಾಗದಲ್ಲಿರುವ ತಹಸೀಲ್ದಾರ್‌ ಕಾರ್ಯಾಲಯವನ್ನು ತಾತ್ಕಾಲಿಕವಾಗಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ತಹಸೀಲ್ದಾರ್‌ ಮಾಡಿರುವ ಆದೇಶ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಥಳಾಂತರ ಬದಲು ನವೀಕರಣಕ್ಕೆ ಆಡಳಿತ ಮುಂದಾಗಲಿ ಎಂದು ಜನರ ಆಗ್ರಹಿಸಿದ್ದಾರೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಪಟ್ಟಣದ ಹೃದಯ ಭಾಗದಲ್ಲಿರುವ ತಹಸೀಲ್ದಾರ ಕಾರ್ಯಾಲಯವನ್ನು ತಾತ್ಕಾಲಿಕವಾಗಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ತಹಸೀಲ್ದಾರ ಮಾಡಿರುವ ಆದೇಶ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಾತ್ಕಾಲಿಕ ಸ್ಥಳಾಂತರ ಬದಲು ನವೀಕರಣಕ್ಕೆ ಆಡಳಿತ ಮುಂದಾಗಲಿ ಎನ್ನುವ ಆಗ್ರಹಗಳು ಬಲವಾಗಿ ಕೇಳಿ ಬರುತ್ತಿವೆ.

ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಆಗಮಿಸುವ ಜನತೆ ಕಾಲಕಾಲೇಶ್ವರ ವೃತ್ತ ಹಾಗೂ ಬಸ್ ನಿಲ್ದಾಣದಲ್ಲಿ ಇಳಿದರೆ ಕೂಗಳತೆ ದೂರ ಅಥವಾ ಕಾಲ್ನಡಿಗೆಯಲ್ಲಿ ತಹಸೀಲ್ದಾರ ಕಾರ್ಯಾಲಯವನ್ನು ತಲುಪಬಹುದು. ಆದರೆ ಈಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯಾಲಯಕ್ಕೆ ಸ್ಥಳಾಂತರಿಸಲು ಆದೇಶಿಲಾಗಿದೆ. ಅಲ್ಲದೆ ಮುಂದಿನ ಆದೇಶದ ವರೆಗೆ ಕಾರ್ಯಾಲಯ ಅಲ್ಲಿಯೇ ಕಾರ್ಯನಿರ್ವಹಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿನ ತಹಸೀಲ್ದಾರ ಕಾರ್ಯಾಲಯ ಸುತ್ತಲಿನ ಪ್ರದೇಶ ಸದಾ ಜನನಿಬಿಡವಾಗಿರುತ್ತದೆ. ಅಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಿಗಳೂ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಕಟ್ಟಡ ಶಿಥಿಲವಾಗಿರುವುದು ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಿರುವ ಕಾರಣ ಇಟ್ಟು ಸ್ಥಳಾಂತರಕ್ಕೆ ತಾಲೂಕು ಆಡಳಿತ ನಿರ್ಧರಿಸಿದೆ.

ಆದರೆ ಈ ಆದೇಶಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕಚೇರಿ ಸ್ಥಳಾಂತರದಿಂದ ಜನರಿಗೆ ತೀವ್ರ ಅನನುಕೂಲ ಉಂಟಾಗುತ್ತದೆ ಎಂದು ಹೇಳುತ್ತಿದ್ದಾರೆ.ಸ್ಥಳಾಂತರ: ಈಗಿನ ಕಟ್ಟಡದಲ್ಲಿ ಮಳೆಗಾಲದ ಸಂದರ್ಭದಲ್ಲಿ ಕಡತ, ಇತರ ಸಾಮಗ್ರಿಗಳ ರಕ್ಷಣೆ ಕಷ್ಟಕರ. ಅಲ್ಲದೆ ಕಾರ್ಯಾಲಯಕ್ಕೆ ಆಗಮಿಸುವ ಜನರಿಗೆ ಮತ್ತು ವಾಹನ ನಿಲುಗಡೆಗೆ ತೊಂದರೆ ಆಗುತ್ತಿದೆ. ಹೀಗಾಗಿ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯಾಲಯಕ್ಕೆ ತಾತ್ಕಾಲಿಕವಾಗಿ ತಹಸೀಲ್ದಾರ ಕಾರ್ಯಾಲಯ ಸ್ಥಳಾಂತರ ಮಾಡುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಹೇಳುತ್ತಾರೆ.

ಸಾರ್ವಜನಿಕರಿಗೆ ಅನುಕೂಲವಾಗಿರುವ ತಹಸೀಲ್ದಾರ ಕಾರ್ಯಾಲಯವನ್ನು ಕೆಲವರ ಲಾಭಕ್ಕಾಗಿ ಈ ಹಿಂದೆ ಜೋಡು ರಸ್ತೆಯಲ್ಲಿನ ಮಾರುಕಟ್ಟೆ ಸ್ಥಳಾಂತರಿಸಿದ ಮಾದರಿಯಲ್ಲಿ ಈಗ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗುತ್ತಿದೆ. ಅವರು ಜನರ ಆಶೋತ್ತರಗಳಿಗೆ ಬೆಲೆ ಕೊಡುವುದಿಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್‌ಮನ್‌ ಅಶೋಕ ವನ್ನಾಲ ಹೇಳುತ್ತಾರೆ.

ಸಾರ್ವಜನಿಕ ಹಿತಾಸಕ್ತಿ ಪ್ರಧಾನವಾಗುತ್ತಿಲ್ಲ, ಪಕ್ಷದ ಕಾರ್ಯಕರ್ತರ ಹಿತ ಕಾಪಾಡುವ ನಿಟ್ಟಿನಲ್ಲಿ ಪೂರಕವಾಗಿ ಇಂತಹ ಕೆಲಸ ನಡೆಸಲಾಗುತ್ತಿದೆ. ಪಟ್ಟಣದಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸದ ಕಾರಣ ಶಾಸಕರಿಗೆ ಜನರ ಆಶೋತ್ತರಗಳು ತಿಳಿಯುತ್ತಿಲ್ಲ. ಸ್ಥಳ ಬದಲಾವಣೆ ಮಾಡುವುದು ಜನವಿರೋಧ ನೀತಿಯಾಗಿದೆ. ಸ್ಥಳಾಂತರ ಬದಲು ನವೀಕರಣಗೊಳಿಸಲು ಆಡಳಿತ ಮುಂದಾಗಲಿ ಎಂದು ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।
ಡ್ರಗ್ಸ್‌ ದಂಧೆಯಲ್ಲಿ ಕಾಂಗ್ರೆಸ್‌ ನಿಕಟವರ್ತಿಗಳ ಕೈವಾಡ: ಶಾಸಕ ಅಶ್ವತ್ಥನಾರಾಯಣ