ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಆದೇಶ, ಈಡೇರಿದ ಜನರ ಬೇಡಿಕೆ

KannadaprabhaNewsNetwork |  
Published : Apr 03, 2025, 12:33 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ವಂದೇ ಭಾರತ್‌ ರೈಲು ಆರಂಭವಾದಾಗಿನಿಂದ ಹಾವೇರಿ ಜಿಲ್ಲೆಯ ಮೂಲಕವೇ ಸಂಚರಿಸುತ್ತಿದ್ದರೂ ಜಿಲ್ಲೆಯಲ್ಲಿ ನಿಲುಗಡೆ ಇಲ್ಲದ್ದರಿಂದ ಈ ರೈಲು ಸಂಚಾರದಿಂದ ಯಾವ ಪ್ರಯೋಜನವೂ ಇರಲಿಲ್ಲ.

ವಿಶೇಷ ವರದಿ

ಹಾವೇರಿ: ಧಾರವಾಡ- ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಇನ್ನು ಮುಂದೆ ಹಾವೇರಿಯಲ್ಲಿ ನಿಲುಗಡೆಯಾಗಲಿದೆ.

ಒಂದೂವರೆ ವರ್ಷದ ಹಿಂದೆಯೇ ಧಾರವಾಡ- ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭವಾಗಿದ್ದರೂ ಜಿಲ್ಲೆಯಲ್ಲಿ ಈ ರೈಲು ನಿಲುಗಡೆಯಾಗುತ್ತಿರಲಿಲ್ಲ. ಈ ಭಾಗದ ಪ್ರಯಾಣಿಕರು ಹುಬ್ಬಳ್ಳಿ ಅಥವಾ ದಾವಣಗೆರೆ ನಿಲ್ದಾಣಕ್ಕೆ ತೆರಳಿ ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಜಿಲ್ಲೆಯಲ್ಲಿ ರೈಲ್ವೆ ಪ್ರಯಾಣಿಕರ ಹಾಗೂ ಬೆಂಗಳೂರಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದು, ಹಾವೇರಿಯಲ್ಲಿ ವಂದೇ ಭಾರತ್‌ ನಿಲುಗಡೆ ಮಾಡಬೇಕು ಎಂಬುದು ಎಲ್ಲರ ಒತ್ತಾಯವಾಗಿತ್ತು. ಈ ಬೇಡಿಕೆಗೆ ಈಗ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ್ದು, ಈ ಕುರಿತು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಶೀಘ್ರದಲ್ಲಿ ಹಾವೇರಿಯ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಲ್ಲಿ ಈ ರೈಲು ನಿಲುಗಡೆಯಾಗಲಿದೆ.

ಜಿಲ್ಲೆಗೆ ಅನುಕೂಲ: ವಂದೇ ಭಾರತ್‌ ರೈಲು ಆರಂಭವಾದಾಗಿನಿಂದ ಹಾವೇರಿ ಜಿಲ್ಲೆಯ ಮೂಲಕವೇ ಸಂಚರಿಸುತ್ತಿದ್ದರೂ ಜಿಲ್ಲೆಯಲ್ಲಿ ನಿಲುಗಡೆ ಇಲ್ಲದ್ದರಿಂದ ಈ ರೈಲು ಸಂಚಾರದಿಂದ ಯಾವ ಪ್ರಯೋಜನವೂ ಇರಲಿಲ್ಲ. ಈ ಭಾಗದಿಂದ ರಾಜಧಾನಿ ಸಂಪರ್ಕಿಸುವ ಅತಿವೇಗದ ರೈಲು ಇದಾಗಿರುವುದರಿಂದ ಸಹಜವಾಗಿಯೇ ಜಿಲ್ಲೆಯಲ್ಲಿ ನಿಲುಗಡೆಯಾದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕರು ಇಲ್ಲಿ ನಿಲುಗಡೆಗೆ ಒತ್ತಾಯಿಸುತ್ತಲೇ ಬಂದಿದ್ದರು. ಯಲವಿಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು ಕೂಡ ಜಿಲ್ಲೆಯ ಪ್ರಮುಖ ನಿಲ್ದಾಣವಾಗಿದ್ದು, ಒಂದು ಕಡೆಯೂ ಜಿಲ್ಲೆಯಲ್ಲಿ ವಂದೇ ಭಾರತ್ ನಿಲುಗಡೆಯಾಗುತ್ತಿರಲಿಲ್ಲ. ಇದು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಜನರಿಗೆ ಬೇಸರ ಮೂಡಿಸಿತ್ತು.

ಹಾವೇರಿ ನಿಲ್ದಾಣವು ಶಿರಸಿ ಸೇರಿದಂತೆ ಸುತ್ತಮುತ್ತಲಿನ ಭಾಗದ ಜನರಿಗೆ ಕೇಂದ್ರ ನಿಲ್ದಾಣವಾಗಿದೆ. ಇಲ್ಲಿಂದ ಅತ್ತ ಹುಬ್ಬಳ್ಳಿ, ಧಾರವಾಡ, ಇತ್ತ ಬೆಂಗಳೂರು ಕಡೆಗೆ ಅನೇಕರು ನಿತ್ಯವೂ ಪ್ರಯಾಣಿಸುತ್ತಾರೆ. ರಾಣಿಬೆನ್ನೂರು ಮತ್ತು ಬ್ಯಾಡಗಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ನಿತ್ಯವೂ ನೂರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ. ಬೆಂಗಳೂರು ಕಡೆಗೆ ಹೋಗುವ ಗದಗ ಭಾಗದ ಪ್ರಯಾಣಿಕರು ಕೂಡ ಹಾವೇರಿಗೆ ಬಂದು ಪ್ರಯಾಣ ಮಾಡಲು ಇನ್ನು ಅನುಕೂಲವಾಗಲಿದೆ. ಇದರಿಂದ ರೈಲ್ವೆ ಇಲಾಖೆಗೂ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಸದರಾದ ಮೇಲೆ ಜಿಲ್ಲೆಯ ಜನರು ಅವರ ಮೇಲೆ ಒತ್ತಡ ಹೇರಿದ್ದರು. ಹಾವೇರಿಯಲ್ಲಿ ವಂದೇ ಭಾರತ್‌ ನಿಲುಗಡೆ ಆದೇಶದ ಹಿಂದೆ ಅವರ ಪರಿಶ್ರಮವೇ ಕಾರಣವಾಗಿದೆ. ಆದೇಶ ಹೊರಬೀಳುತ್ತಿದ್ದಂತೆ ಪಕ್ಷಾತೀತವಾಗಿ ಬಸವರಾಜ ಬೊಮ್ಮಾಯಿ ಅವರನ್ನು ಶ್ಲಾಘಿಸುತ್ತಿದ್ದಾರೆ. ಅಲ್ಲದೇ ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ.

ರೈಲ್ವೆ ಸಚಿವರಿಗೆ ಬೊಮ್ಮಾಯಿ ಧನ್ಯವಾದ

ಧಾರವಾಡ- ಬೆಂಗಳೂರು ಮಧ್ಯ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆಗೆ ಆದೇಶ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ‌ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದಲ್ಲಿ ಕಳೆದ ಹತ್ತು ವರ್ಷ ಎಲ್ಲ ರಂಗದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ. ವಿಶೇಷವಾಗಿ ರೈಲ್ವೆ ಸಂಪರ್ಕ, ಡಿಜಿಟಲ್, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ದೇಶ ಭಾರತವಾಗಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಲೈನ್‌ ಆಗಿರುವುದು ಕಳೆದ ಹತ್ತು ವರ್ಷದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ. ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಕಳೆದ ವರ್ಷ ₹7 ಸಾವಿರ ಕೋಟಿ ಹಾಗೂ ಈ ವರ್ಷ ₹7 ಸಾವಿರ ಕೋಟಿ ಅನುದಾನ ನೀಡಿದೆ. ವಿಶೇಷವಾಗಿ ರೈಲ್ವೆ ಲೈನುಗಳ ವಿದ್ಯುದ್ದೀಕರಣ ಆಗಿದೆ. ಇದರ ಪರಿಣಾಮ ಅತಿವೇಗವಾಗಿ ಹೋಗುವ ವಂದೇ ಭಾರತ ರೈಲು ಕರ್ನಾಟಕದಲ್ಲಿ ಆರಂಭವಾಗಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಕಾರಣ ಎಂದು ಅವರು ಬಣ್ಣಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ