ಶಿವಕುಮಾರ ಕುಷ್ಟಗಿ
ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಎಂಬವರೇ ಅಮಾನತ್ತಾದ ಅಧಿಕಾರಿ. ಆಯುಷ್ ಇಲಾಖೆಯ ಗದಗ ವ್ಯಾಪ್ತಿಯಲ್ಲಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದ ಔಷಧಿಗಳಲ್ಲಿ ಭಾರಿ ಪ್ರಮಾಣದ ಕಮಿಷನ್ ದಂಧೆ ನಡೆದಿರುವುದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಅವರು ರೋನ್ಪಾಲ್ ಬಯೊಟೆಕ್ ಕಂಪನಿಯ ಪ್ರತಿನಿಧಿ ಜತೆಗಿನ ಆಡಿಯೋದಿಂದ ಬಹಿರಂಗವಾಗಿತ್ತು. ಇದಕ್ಕಿಂತ ಆತಂಕದ ಸಂಗತಿ ಎಂದರೆ ಈ ಕಮಿಷನ್ ದಂಧೆಯ ಸಂದರ್ಭದಲ್ಲಿ ಪೂರೈಕೆಯಾದ ಔಷಧಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ಫೇಲ್ ಆಗುವ ಮೂಲಕ ಆಘಾತಕಾರಿ ಸತ್ಯ ಹೊರಬಿದ್ದಿದೆ. ಈ ಹಿನ್ನೆಲೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಅವರನ್ನು ಅಮಾನತು ಮಾಡಲಾಗಿದೆ.
ಬಯಲಾದ ಕಹಿ ಸತ್ಯ: 2024- 25ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೂರೈಕೆಯಾದ ಆಯುರ್ವೇದ ಔಷಧಿಗಳ ಕುರಿತು ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಔಷಧ ಪರೀಕ್ಷಕರ ಕಚೇರಿಯು ರ‍್ಯಾಂಡಮ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ಬೆಂಗಳೂರಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆದ ಈ ಪರೀಕ್ಷೆಯ ವರದಿ ಈಗ ಲಭ್ಯವಾಗಿದ್ದು, ಹಲವು ಔಷಧಿಗಳು ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ (ಎನ್ಎಸ್‌ಕ್ಯು) ಎಂದು ದೃಢಪಟ್ಟಿವೆ. ಈ ಔಷಧಿಗಳು ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲದ ಕಾರಣ ಸಾರ್ವಜನಿಕ ಬಳಕೆಗೆ ಅನ್‌ಫಿಟ್ ಎಂದು ಘೋಷಿಸಲಾಗಿದೆ. ಲ್ಯಾಬ್ ವರದಿ ಪ್ರತಿಗಳು ಕನ್ನಡಪ್ರಭಕ್ಕೆ ಲಭ್ಯವಾಗಿವೆ.ಕಮಿಷನ್ ಆಸೆ: ಗದಗ ಜಿಲ್ಲಾ ಆಯುಷ್ ಅಧಿಕಾರಿ ಸೇರಿದಂತೆ ಕೆಲವು ಪ್ರಭಾವಿ ಅಧಿಕಾರಿಗಳು ಖಾಸಗಿ ಕಂಪನಿಗಳಿಂದ ದೊಡ್ಡ ಮಟ್ಟದ ಕಮಿಷನ್ ಪಡೆದು, ಕಳಪೆ ಗುಣಮಟ್ಟದ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲು ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಕನ್ನಡಪ್ರಭ ನಡೆಸಿದ ವಿಶೇಷ ತನಿಖಾ ವರದಿಯು ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಲ್ಲದೇ ಅವರನ್ನು ಅಮಾನತು ಕೂಡಾ ಮಾಡಲಾಗಿದೆ.
ಶನಿವಾರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲಿಯೇ ಗದಗ ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿಗಳು ಬೆಟಗೇರಿಯಲ್ಲಿರುವ ಜಿಲ್ಲಾ ಆಯುಷ್ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಕಡತ ಪರಿಶೀಲನೆ ಹಾಗೂ ಟೆಂಡರ್ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದು, ಮುಂಬರುವ ದಿನಗಳಲ್ಲಿ ಈ ಕುರಿತು ಲೋಕಾ ತನಿಖೆ ಕೂಡಾ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.