ಶಾಲೆಗಳಿಗೆ ನೀಡುವ ಹೆಚ್ಚಿನ ಅನುದಾನ ಶುಚಿತ್ವಕ್ಕೆ ಬಳಸಲು ಆದೇಶ

KannadaprabhaNewsNetwork |  
Published : Dec 30, 2023, 01:15 AM ISTUpdated : Dec 30, 2023, 01:16 AM IST
ಬಂಗಾರಪ್ಪ | Kannada Prabha

ಸಾರಾಂಶ

ಇತ್ತೀಚೆಗೆ ರಾಜ್ಯದಲ್ಲಿ ಮಕ್ಕಳು ಶೌಚಾಲಯ ಶುಚಿಗೊಳಿಸಿದ ಮೂರು ಪ್ರಕರಣಗಳು ನಡೆದಿವೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ ಎಂದಿದ್ದಾರೆ ಸಚಿವ ಮಧು ಬಂಗಾರಪ್ಪ.

- ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿಕೆ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪ್ರಸ್ತುತ ವರ್ಷದಿಂದ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ಅದನ್ನು ಶೌಚಾಲಯದ ಶುಚಿತ್ವ ಹಾಗೂ ನಿರ್ವಹಣೆಗೆ ಬಳಸಬೇಕೆಂದು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಮಕ್ಕಳು ಶೌಚಾಲಯ ಶುಚಿಗೊಳಿಸಿದ ಮೂರು ಪ್ರಕರಣಗಳು ನಡೆದಿವೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ಇದರ ನಿಯಂತ್ರಣಕ್ಕೆ ಎಸ್‌ಡಿಎಂಸಿ ಮತ್ತು ಶಾಲೆ ಜಂಟಿಯಾಗಿ ಕಾರ್ಯನಿರ್ವಹಿಸುವ ಕುರಿತು ಹೊಸ ಆದೇಶ ಹೊರಡಿಸಲಾಗುವುದು. ಯಾವುದೇ ಕಾರಣಕ್ಕೂ ಮಕ್ಕಳ ಕೈಯಲ್ಲಿ ಶೌಚಾಲಯ ಶುಚಿಗೊಳಿಸಬಾರದು. ಅದಕ್ಕೆ ಸಂಬಂಧಿಸಿ ಪ್ರಕರಣಗಳನ್ನು ಸಹ ದಾಖಲಿಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

ಶಿಕ್ಷಕರ ಕೊರತೆ

‘ಶಾಲೆಗಳಲ್ಲಿ 43 ಸಾವಿರ ಶಿಕ್ಷಕರ ಕೊರತೆಯಿದೆ. ಅನುದಾನಿತ ಶಾಲೆಗಳಿಗೆ 2015ರಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ನಾವು ಆಡಳಿತಕ್ಕೆ ಬಂದ ಏಳು ತಿಂಗಳಲ್ಲಿ 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಂಡಿದ್ದೇವೆ. ಶಿಕ್ಷಕರ ಕೊರತೆ ನೀಗಿಸಲು ಸಿಎಂ ಜೊತೆ ಚರ್ಚಿಸಿದ್ದು, ಬಜೆಟ್‌ನಲ್ಲಿ ಅನುದಾನ ನೀಡುವ ಭರವಸೆಯಿದೆ. ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಿದರೆ ಮಕ್ಕಳು ಸಹ ಬರುತ್ತಾರೆ. ನಮ್ಮ ಧ್ಯೇಯ ಸರ್ಕಾರಿ ಶಾಲೆ ಉಳಿಸುವುದು’ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಭ್ರಷ್ಟಾಚಾರದ ಗಂಭೀರ ಆರೋಪಗಳಿದ್ದಾಗ, ತನಿಖೆ ನಡೆಸಿ ಹೊರಗೆ ತರುವುದು ಒಳ್ಳೆಯದು. ಆದರೆ, ಅದು ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದರು.

‘ಬಿ.ಕೆ. ಹರಿಪ್ರಸಾದ ಕಾಂಗ್ರೆಸ್‌ನಲ್ಲಿ ಇರಬಾರದು’ ಎನ್ನುವ ಪ್ರಣವಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತಲೆಕೆಟ್ಟಿರುವ ಸ್ವಾಮೀಜಿಗಳ ಹೇಳಿಕೆಗೆ ಉತ್ತರ ನೀಡುವುದಿಲ್ಲ. ಅಷ್ಟಕ್ಕೂ ಅವರು ಸ್ವಾಮೀಜಿಯೂ ಅಲ್ಲ’ ಎಂದರು.

ಸೆಟ್ಲ್‌ಮೆಂಟ್‌ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಾಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿರುವ ಕುರಿತು ಪ್ರತಿಕ್ರಿಯಿಸಿ, ನನ್ನ ಮೇಲೆ ಬಂದಿರುವುದು ಚೆಕ್ ಬೌನ್ಸ್ ಪ್ರಕರಣವಲ್ಲ. ನಾವೇ ಕೋರ್ಟ್ ನಲ್ಲಿ ಸೆಟ್ಲ್‌ಮೆಂಟ್ ಮಾಡಿಕೊಂಡಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಅವರು ಶುಕ್ರವಾರ ರಾತ್ರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ನಾವೇ ಒಪ್ಪಿಕೊಂಡು ಸೆಟ್ಲ್‌ಮೆಂಟ್‌ ಮಾಡಿಕೊಂಡಿದ್ದೇವೆ. ಡಿ. 26ರಂದು ಬಂದಿದೆ. ಇದು 12 ವರ್ಷಗಳ ಹಿಂದಿನ ವ್ಯಾಜ್ಯ. ಇದನ್ನು ನಾನೇ ಬರವಣಿಗೆಯಲ್ಲಿ ಬರೆದು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಕೋರ್ಟಿಗೆ ಬರೆದುಕೊಟ್ಟಿದ್ದೇನೆ. ಅಲ್ಲದೇ ಇದು ನನ್ನ ವೈಯಕ್ತಿಕ ಇಲ್ಲ.‌ ಕಂಪನಿ ಮೇಲೆ ಇದೆ. ಹೀಗಾಗಿ, ಮಾಧ್ಯಮ ಜವಾಬ್ದಾರಿಯುತವಾಗಿ ಮಾಹಿತಿ ನೀಡಬೇಕು ಎಂದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಕಾರಜೋಳ ಅವರು ಚುನಾವಣೆಯಲ್ಲಿ ಏಕೆ ಸೋತರಂತೆ, ಈಗೇಕೆ ಅವರು ಈ ಸ್ಥಿತಿಯಲ್ಲಿದ್ದಾರೆ ಎನ್ನುವುದಕ್ಕೆ ಉತ್ತರ ಹುಡುಕಲಿ ಆಗ ಎಲ್ಲವೂ ಗೊತ್ತಾಗಲಿದೆ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ