ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತಲು ಆದೇಶ: ರೈತರ ಆಕ್ರೋಶ

KannadaprabhaNewsNetwork |  
Published : Mar 20, 2025, 01:17 AM IST
ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಬಳಿಯ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಪಂಪ್‌ಹೌಸ್‌ನಲ್ಲಿ ರೈತರು ಜಮಾವಣೆ ಗೊಂಡಿರುವದು,  | Kannada Prabha

ಸಾರಾಂಶ

ತುಬಚಿ-ಬಬಲೇಶ್ವರ ಏತ ನೀರಾವರಿ ಪಂಪ್‌ಹೌಸ್‌ ಪ್ರಾರಂಭಿಸಿ ಬಬಲೇಶ್ವರ ಭಾಗದ ಕೆರೆ ಹಾಗೂ ಬಾಂದಾರಗಳನ್ನು ತುಂಬಿಸಲು ಕೃಷ್ಣಾ ನದಿಯಿಂದ 0.25 ಟಿಎಂಸಿ ನೀರೆತ್ತಲು, ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಬುಧವಾರ ಆದೇಶ ನೀಡಿರುವುದು ಜಮಖಂಡಿ ತಾಲೂಕಿನ ರೈತರನ್ನು ಕೆರಳಿಸಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ತುಬಚಿ-ಬಬಲೇಶ್ವರ ಏತ ನೀರಾವರಿ ಪಂಪ್‌ಹೌಸ್‌ ಪ್ರಾರಂಭಿಸಿ ಬಬಲೇಶ್ವರ ಭಾಗದ ಕೆರೆ ಹಾಗೂ ಬಾಂದಾರಗಳನ್ನು ತುಂಬಿಸಲು ಕೃಷ್ಣಾ ನದಿಯಿಂದ 0.25 ಟಿಎಂಸಿ ನೀರೆತ್ತಲು, ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಬುಧವಾರ ಆದೇಶ ನೀಡಿರುವುದು ಜಮಖಂಡಿ ತಾಲೂಕಿನ ರೈತರನ್ನು ಕೆರಳಿಸಿದೆ.ಬಬಲೇಶ್ವರ ಭಾಗದ 27 ಕೆರೆಗಳು ಹಾಗೂ 25 ಬಾಂದಾರಗಳನ್ನು ತುಂಬಲು 0.25 ಟಿಎಂಸಿ ನೀರೆತ್ತುವಂತೆ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದು, ನೀರೆತ್ತುವುದಕ್ಕಾಗಿ ಬುಧವಾರ ನೀರಾವರಿ ಇಲಾಖೆ ಅಧಿಕಾರಿಗಳು, ಪೊಲೀಸರ ಜೊತೆಗೆ ಪಂಪ್‌ಹೌಸ್‌ ಬಳಿ ಆಗಮಿಸಿದಾಗ ರೈತರು ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದರು. ಅಧಿಕಾರಿಗಳು ರೈತರ ಮನವೊಲಿಸಲು ಹರಸಾಹಸ ನಡೆಸಿದರು.

ಗಲಗಲಿ ಯಿಂದ ಹಿಡಿದು ಹಿಪ್ಪರಗಿವರೆಗಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಆದೇಶ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರಲ್ಲದೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಬೇಸಿಗೆಯ ಕಾಲವಾಗಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಎಪ್ರೀಲ್‌ ಹಾಗೂ ಮೇ ತಿಂಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನದಿಯಲ್ಲಿದ್ದ ನೀರನ್ನು ಎತ್ತುವುದರಿಂದ ರೈತರಿಗೆ ಸಾಕಷ್ಟು ತೊಂದರೆ ಆಗಲಿದೆ. ಜನ-ಜಾನುವಾರುಗಳ ಸಮೇತ ಗುಳೆ ಹೋಗುವ ಪ್ರಸಂಗವಿದ್ದು, ಸರ್ಕಾರ ಇಲ್ಲಿಯ ರೈತರ ಕಷ್ಟ ಅರ್ಥ ಮಾಡಿಕೊಳ್ಳುವಂತೆ ಮನವಿ ಮಾಡಿದ್ದು, ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.

ತಾಲೂಕಿನ ಕವಟಗಿ ಗ್ರಾಮದ ಬಳಿ ನಿರ್ಮಿಸಲಾದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಸಚಿವ ಎಂ.ಬಿ. ಪಾಟೀಲರು ಪ್ರತಿನಿಧಿಸುವ ಬಬಲೇಶ್ವರ ಹಾಗೂ ಜಮಖಂಡಿ ಭಾಗದ ಕೆಲ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರು ಹರಿದು ಹೋಗುವ ಹೆಚ್ಚಿನ ನೀರನ್ನು ಬಳಕೆ ಮಾಡಿಕೊಂಡು ಬಬಲೇಶ್ವರ ಹಾಗೂ ಜಮಖಂಡಿ ತಾಲೂಕಿನ ಕೆಲ ಗ್ರಾಮಗಳ ಕೆರೆ, ಬಾಂದಾರ ತುಂಬಿಕೊಂಡು, ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ಆದರೆ ಬೇಸಿಗೆಯ ಸಮಯದಲ್ಲಿ ಈ ಯೋಜನೆಯಡಿ ನೀರು ಹರಿಸುವುದು ಅವೈಜ್ಞಾನಿಕ ಕ್ರಮವಾಗಿದೆ. ರಾಜಕೀಯ ಲಾಭಕ್ಕಾಗಿ ಒಬ್ಬರಿಂದ ನೀರು ಕಸಿದು ಮತ್ತೊಬ್ಬರಿಗೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಆದೇಶ ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಒತ್ತಡಕ್ಕೆ ಮಣಿದು ಆದೇಶ: ತಾಲೂಕು ಹಾಗೂ ಉಪವಿಭಾಗ ಅಧಿಕಾರಿಗಳು ಜಿಲ್ಲೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಸ್ತುಸ್ಥಿತಿ ಅರಿತು ನೀರೆತ್ತುವ ಅನುಮತಿ ನೀಡಬೇಕಿತ್ತು. ಆದರೆ ರಾಜಕೀಯದ ಒತ್ತಡಕ್ಕೆ ಮಣಿದು ದಿಢೀರ್‌ ಅದೇಶ ಹೋರಡಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಥವಾ ಅವರಿಂದ ಸಲಹೆ ಪಡೆಯದೇ ಆದೇಶ ನೀಡಲಾಗಿದೆ ಎಂದು ರೈತರು ದೂರುತ್ತಿದ್ದಾರೆ. ಸಚಿವರು ಇಡೀ ರಾಜ್ಯವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಮರೆಯಬಾರದು. ಸ್ವಾರ್ಥಕ್ಕಾಗಿ ತಮ್ಮ ಕ್ಷೇತ್ರಕ್ಕೆ ನೀರು ಹರಿಸಲು ಮತ್ತೊಂದು ಕ್ಷೇತ್ರದ ರೈತರ ಬಲಿ ಕೊಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.ಪ್ರಾದೇಶಿಕ ಆಯುಕ್ತರು ನೀಡಿರುವ ಆದೇಶವನ್ನು ಪಾಲಿಸಬೇಕಾಗುತ್ತದೆ. ಇಲ್ಲಿರುವ ಪರಿಸ್ಥಿತಿ ಹಾಗೂ ರೈತರ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ತಲುಪಿಸಲಾಗಿದೆ. ಸಂಜೆಯವರೆಗೆ ಸರ್ಕಾರ ಏನು ನಿರ್ಧಾರ ತೆಗೆದು ಕೊಳ್ಳಲಿದೆ ಎಂದು ಕಾದು ನೋಡುತ್ತೇವೆ.

-ಶ್ವೇತಾ ಬೀಡಿಕರ ಉಪವಿಭಾಗಾಧಿಕಾರಿಗಳು ಜಮಖಂಡಿಬೇಸಿಗೆಯ ಸಮಯದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿ ಪ್ರಾರಂಭಿಸುವುದರಿಂದ ತಾಲುಕಿನ ಹಿಪ್ಪರಗಿ ಯಿಂದ ಗಲಗಲಿಯ ವರೆಗಿನ ಸುಮಾರು 34ಕ್ಕೂ ಅಧಿಕ ನದಿತೀರದ ಗ್ರಾಮಗಳ ರೈತರಿಗೆ ತೊಂದರೆಯಾಗಲಿದೆ. ಇಲ್ಲಿಯ ರೈತರು ಸಂಪೂರ್ಣವಾಗಿ ಕೃಷ್ಣಾ ನದಿ ಅವಲಂಬಿಸಿದ್ದು, ಸರ್ಕಾರ ಅದೇಶ ಹಿಂದಕ್ಕೆ ಪಡೆಯಬೇಕು. ನದಿಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಏತ ನೀರಾವರಿ ಪ್ರಾರಂಭಿಸಿದರೆ ನದಿಯ ನೀರು ಬತ್ತಿಹೋಗುತ್ತದೆ. ಜನ ಜಾನುವಾರುಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು

- ಸಿದ್ಧುಗೌಡ ಪಾಟೀಲ ರೈತ ಮುಖಂಡರು ಹಿರೇಪಡಸಲಗಿ

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು