ಅಂಗಾಂಗ ದಾನದ ಜಾಗೃತಿ ವೈದ್ಯಕೀಯ ಕಾರ್ಯಾಗಾರ

KannadaprabhaNewsNetwork | Published : Feb 6, 2025 12:16 AM

ಸಾರಾಂಶ

ಅಂಗಾಂಗ ದಾನದ ಜಾಗೃತಿ ಕುರಿತು ವೈದ್ಯಕೀಯ ಕಾರ್ಯಾಗಾರವು ನಡೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ಅರವಳಿಕೆ ವಿಭಾಗ ಮತ್ತು ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸಹಯೋಗದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನ ಕೊಠಡಿಯಲ್ಲಿ ಅಂಗಾಂಗ ದಾನದ ಜಾಗೃತಿ ಕುರಿತು ವೈದ್ಯಕೀಯ ಕಾರ್ಯಾಗಾರವು ಮಂಗಳವಾರ ನಡೆಯಿತು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ ಅಂಗಾಂಗ ದಾನದ ಸಾಮಾಜಿಕ ಹೊಣೆಗಾರಿಕೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತಮ್ಮ ಅನುಭವವನ್ನು ವಿವರಿಸಿದರು. ಅಂಗಾಂಗ ದಾನದ ಸಮಯದಲ್ಲಿ ಪೊಲೀಸ್ ಇಲಾಖೆಯಿಂದ ತ್ವರಿತವಾಗಿ ನಿರಾಕ್ಷೇಪಣೆಯನ್ನು ನೀಡಬೇಕಾಗಿದ್ದು, ರಸ್ತೆ ಅಪಘಾತ ಸಂದರ್ಭ ಮತ್ತು ಅಂಗಾಂಗಗಳನ್ನು ಸಾಗಿಸುವ ಸಂದರ್ಭ ಗ್ರೀನ್ ಕಾರಿಡಾರ್ ಸೃಷ್ಟಿಸಿ ಜಿರೋ ಟ್ರಾಪಿಕ್ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪೋಲಿಸ್ ಇಲಾಖೆಯ ಜವಾಬ್ದಾರಿಯನ್ನು ವಿವರಿಸಿದರು.

ಅಂಗಾಂಗ ದಾನ ಮಾಡಿಸುವಲ್ಲಿ ಸಾಮಾಜಿಕವಾಗಿ ಎಲ್ಲರಲ್ಲೂ ಜಾಗೃತಿಗೊಳಿಸಬೇಕು. ಶಾಲಾ-ಕಾಲೇಜು ಹಂತದಲ್ಲಿಯೇ ಮಕ್ಕಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಪಠ್ಯದಲ್ಲಿ ಅಂಗಾಂಗ ದಾನದ ಮಹತ್ವವನ್ನು ವಿವರಿಸುವ ಕೆಲಸವಾಗಬೇಕು. ವೈದ್ಯರು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ರಸ್ತೆ ಅಪಘಾತವಾದ ಸಂದರ್ಭ ಹೆಚ್ಚಾಗಿ ರೋಗಿಯ ಮೆದುಳು ನಿಷ್ಕ್ರಿಯವಾಗಿರುತ್ತದೆ. ಈ ಸಂದರ್ಭ ಕುಟುಂಬದ ಮನವೊಲಿಸಿ ಅಂಗಾಂಗ ದಾನ ಮಾಡಲು ಪ್ರೇರೇಪಿಸುವ ಬಗ್ಗೆ ಜಾಗೃತಿ ಹೆಚ್ಚಾಗಬೇಕು ಎಂದು ತಿಳಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಅಂಗಾಂಗ ದಾನವು ಒಂದು ಉದಾತ್ತ ಕಾರ್ಯವಾಗಿದೆ. ಪ್ರತಿಯೊಬ್ಬರೂ ಇದನ್ನು ಪ್ರೋತ್ಸಾಹಿಸಬೇಕು ಮತ್ತು ಇತರರನ್ನು ಪ್ರೇರೇಪಿಸಬೇಕು ಎಂದು ಅವರು ಒತ್ತಿ ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ಎ.ಜೆ.ಲೋಕೇಶ್ ಮಾತನಾಡಿ, ನಮ್ಮ ಆಸ್ಪತ್ರೆಯು ಸರ್ಕಾರಿ ಅಧಿಸೂಚಿತ ಅಂಗ ಪಡೆಯುವ ಕೇಂದ್ರವಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ನಾಗರಿಕರು ಅಂಗದಾನಕ್ಕೆ ಪ್ರತಿಜ್ಞೆ ಮಾಡಬೇಕು ಮತ್ತು ಇತರರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಕೋರಿದರು.

ಸೊಟ್ಟೊ ಸಂಯೋಜಕ ಡಾ. ರವಿಶಂಕರ ಶೆಟ್ಟಿ ಅವರು ಸೊಟ್ಟೊ ಸಂಸ್ಥೆಯ ಕಾರ್ಯಗಳನ್ನು ವಿವರಿಸಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಅಂಗದಾನದ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿದ ಮೊದಲ ಕಾಲೇಜು ಎಂದು ಹೇಳಿದರು.

ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಅಂಗದಾನದಲ್ಲಿ ಉತ್ಕೃಷ್ಟ ಕೇಂದ್ರವಾಗಿ ಮಾಡಲು ಎಲ್ಲ ವೈದ್ಯರುಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ದು ಅವರು ಕೋರಿದರು.

ಅಂಗದಾನ ತಜ್ಞರು ಕಾರ್ಯಾಗಾರವನ್ನು ನಡೆಸಿದರು. ರಾಜ್ಯದ ಹಲವಾರು ವೈದ್ಯಕೀಯ ಕಾಲೇಜಿನ ವೈದ್ಯರು ಉಪಸ್ಥಿತರಿದ್ದರು. ಕೊಡಗು ಜಿಲ್ಲೆಯ ಹಲವಾರು ಸರ್ಕಾರೇತರ ಸಂಸ್ಥೆಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಅಪೋಲೋ ಬಿಜಿಎಸ್ ಮೈಸೂರು ತೀವ್ರ ನಿಘಾ ಘಟಕದ ತಜ್ಞ ವೈದ್ಯರಾದ ಡಾ.ರಾಮಕೃಷ್ಣ, ಬೆಂಗಳೂರು ತೀವ್ರ ನಿಘಾ ಘಟಕ ಸ್ಪರ್ಶ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಕಾರ್ತಿಕ್ ಲಕ್ಷ್ಮಿಕಾಂತ್, ಮೈಸೂರು ಬಿಜಿಎಸ್ ಅಪೋಲೊ ವ್ಯಸನ ಸಲಹೆಗಾರರಾದ ಸುದಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಸಿ ಸಂಯೋಜಕರಾದ ನೌಶದ್ ಪಾಷ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ., ಮುಖ್ಯ ಆಡಳಿತಾಧಿಕಾರಿ ರೋಹಿಣಿ, ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ. ಸೋಮಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ನಂಜುಂಡಯ್ಯ, ನೋಡಲ್ ಅಧಿಕಾರಿ ಡಾ.ಧನಂಜಯ್ ಮೇದಪ್ಪ ಮತ್ತು ಅರವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಮಿತಾ, ವಿಭಾಗದ ವೈದ್ಯರಾದ ಡಾ.ಅಯ್ಯಪ್ಪ, ಡಾ.ಗಾಯತ್ರಿ, ಡಾ. ನಿಷೀದ್, ಡಾ. ತಾರಾನಂದನ್, ಡಾ. ಕಾವ್ಯಾ, ಡಾ. ಅಮೂಲ್ಯ ಮತ್ತು ಡಾ.ಕಸ್ತೂರಿ ಇತರರು ಇದ್ದರು.

ಕಾರ್ಯಕ್ರಮದ ಮೂಲಕ ಅಂಗದಾನದ ಮಹತ್ವ ಮತ್ತು ಅದರ ಸಾಮಾಜಿಕ ಪ್ರಭಾವದ ಬಗ್ಗೆ ಚರ್ಚೆ ನಡೆಯಿತು. ಪ್ರತಿಯೊಬ್ಬರೂ ಅಂಗದಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಇತರರನ್ನು ಪ್ರೇರೇಪಿಸಲು ಒಟ್ಟಾಗಿ ಕೆಲಸ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು.

Share this article