ಕನ್ನಡಪ್ರಭ ವಾರ್ತೆ ನಾಗಮಂಗಲ
ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯ ಮತ್ತು ಆದಿಚುಂಚನಗಿರಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಸೆ.19ರಂದು ಅಂಗಾಂಗ ದಾನ ಜಾಗೃತಿ ಜಾಥಾ ಬಿಜಿಎಸ್ 5 ಕೆ ವಾಕ್‌ಫಾರ್ ಲೈಫ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥಸ್ವಾಮೀಜಿ ತಿಳಿಸಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ರೈತರು ಮತ್ತು ಜನಸಾಮಾನ್ಯರಿಗೆ ಹಲವು ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿರುವ ಆದಿಚುಂಚನಗಿರಿ ಆಸ್ಪತ್ರೆಯು ಕಳೆದ ನಾಲ್ಕೈದು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಕಳೆದೊಂದು ವರ್ಷದಲ್ಲಿ 25 ಮಂದಿಗೆ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ವಿವಿಧ ಕಾರಣಗಳಿಂದ ಮೃತಪಟ್ಟವರ ಕಣ್ಣು, ಕಿಡ್ನಿ ಸೇರಿದಂತೆ ದೇಹದ ಯಾವುದೇ ಅಂಗಾಂಗವು ಬೇರೊಬ್ಬರಿಗೆ ಉಪಯೋಗವಾಗಬೇಕೆಂಬ ನಿರ್ಮಲಾನಂದನಾಥ ಶ್ರೀಗಳ ಆಶಯದಂತೆ ಹಳ್ಳಿಗಾಡಿನ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಅಂಗಾಂಗ ದಾನ ಜಾಗೃತಿ ಜಾಥಾ ಬಿಜಿಎಸ್ 5 ಕೆ ವಾಕ್‌ಫಾರ್ ಲೈಫ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ಸೆ.19ರ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಬಿ.ಜಿ.ನಗರದಿಂದ ಬೆಳ್ಳೂರು ಕ್ರಾಸ್ ವರೆಗೆ 5 ಕಿಮೀ ದೂರದ ಜನಜಾಗೃತಿ ಜಾಥಾಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಚಾಲನೆ ನೀಡುವರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲೆ ಮತ್ತು ನೆರೆ ಜಿಲ್ಲೆಯ ಹಾಲಿ- ಮಾಜಿ ಶಾಸಕರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಹಿರಿಯ ಅಧಿಕಾರಿಗಳು, ಸಿನಿಮಾ ನಟರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.ಆಸ್ಪತ್ರೆ ಅಧೀಕ್ಷಕ ಡಾ.ಶಿವಕುಮಾರ್ ಮಾತನಾಡಿ, ದಾನಿಗಳ ಕೊರತೆಯಿಂದಾಗಿ ಸೂಕ್ತವಾದ ಅಂಗಾಂಗ ಇಲ್ಲದೆ ಅದೆಷ್ಟೋ ಮಂದಿ ಉತ್ತಮ ಜೀವನ ನಡೆಸಲಾಗದೆ ಸಾವಿನ ಅಂಚಿನಲ್ಲಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಬೃಹತ್ ಅಂಗಾಂಗ ದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಈ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಧರ್ಮೇಂದ್ರ ಇದ್ದರು.