ನಾಗಮಂಗಲ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕನ ದೇಹದ ಅಂಗಾಂಗಳನ್ನು ಪೋಷಕರು ಆಸ್ಪತ್ರೆಗೆ ದಾನ ಮಾಡಿ ಮಗನ ಸಾವಿನ ದುಃಖದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ಬೆಳ್ಳೂರಿನ ಮಾರುತಿಪುರ ಸಮೀಪ ಅ.21 ರಂದು ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ನಾಯಕನಕೊಪ್ಪಲು ಗ್ರಾಮದ ವೆಂಕಟಲಕ್ಷ್ಮಮ್ಮ ಮತ್ತು ರಾಜಣ್ಣ ದಂಪತಿ ಪುತ್ರ ನಟರಾಜ್(28) ಗಂಭೀರವಾಗಿ ಗಾಯಗೊಂಡು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಟರಾಜ್ ಕೊನೆಯುಸಿರೆಳೆದಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡಿರುವ ಮೃತ ನಟರಾಜ್ ಪೋಷಕರು ತಮ್ಮ ಮಗನ ಸಾವಿನ ದುಃಖದ ನಡುವೆಯೂ ಆತನ ಕಣ್ಣು, ಕಿಡ್ನಿ ಸೇರಿದಂತೆ ದೇಹದ ಕೆಲ ಅಂಗಾಂಗಳನ್ನು ಆಸ್ಪತ್ರೆಗೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.