ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ವತಿಯಿಂದ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಕುರಿತು ರೈತರಿಗೆ ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ "ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ " ಜಾಗೃತಿ ಜಾಥಾ ನಗರದಲ್ಲಿ ನಡೆಯಿತು.
ನಗರದ ಜ್ಯುನಿಯರ್ ಕಾಲೇಜು ಆವರಣದಿಂದ ಆರಂಭವಾದ ನಡಿಗೆ ಬಂಗಾರಪೇಟೆ ವೃತ್ತ ಮಾರ್ಗವಾಗಿ ಪರಿವೀಕ್ಷಣ ಮಂದಿರ ತಲುಪಿತು. ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಅಕ್ರಂಪಾಷ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಸಿರಿಧಾನ್ಯದ ಮಹತ್ವ ಅರಿವು ಹೆಚ್ಚಾಗುತ್ತಿದೆ. ಭಾರತ ಸಿರಿಧಾನ್ಯಗಳ ತವರೂರಾಗಿದೆ. ಜಗತ್ತಿನಲ್ಲಿ ಬೆಳೆಯುವ ಸಿರಿಧಾನ್ಯಗಳ ಪೈಕಿ ಶೇ.42 ರಷ್ಟು ಸಿರಿಧಾನ್ಯವನ್ನು ನಮ್ಮ ದೇಶದಲ್ಲೇ ಬೆಳೆಯಲಾಗುತ್ತಿದ್ದು, ಸಿರಿಧಾನ್ಯ ಬೆಳೆಯುವಲ್ಲಿ ನಮ್ಮ ರಾಜ್ಯ ಮುಂದಿದೆ ಎಂದರು.ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯ ಅತ್ಯುತ್ತಮ ಔಷಧಿ. ಬಹಳ ಕಡಿಮೆ ನೀರಿನಲ್ಲೂ ಸಿರಿಧಾನ್ಯ ಬೆಳೆಯಬಹುದಾಗಿದೆ. ರೋಗಮುಕ್ತ ಜೀವನಕ್ಕಾಗಿ ಎಲ್ಲರೂ ಸಿರಿ ಧಾನ್ಯಗಳ ಬಳಕೆಗೆ ಮುಂದಾಗಬೇಕು, ಸಿರಿಧಾನ್ಯಗಳು ಭೂಮಿಗೂ ವರದಾನ, ಆರೋಗ್ಯಕ್ಕೂ ವರದಾನ ಎಂದು ಹೇಳಿದರು.ಅತ್ಯಧಿಕವಾದ ನಾರಿನ ಅಂಶ ಸೇರಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸತ್ವಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು, ಪಿಸ್ಟಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಜೀವನಶೈಲಿ ಆಧಾರಿತ ಕೆಲವು ರೋಗಗಳಿಗೂ ಇದು ಉತ್ತಮ ಮದ್ದಾಗಿದೆ. ಆಹಾರದಲ್ಲಿ ಹೆಚ್ಚಾಗಿ ಸಿರಿಧಾನ್ಯ ಬಳಸಬೇಕು. ಈ ಧಾನ್ಯವನ್ನು ಜನಪ್ರಿಯಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.ನಮ್ಮ ರೈತರು ಸಾವಯವ ಹಾಗೂ ಮಿಶ್ರ ಬೇಸಾಯ ಪದ್ಧತಿ ರೂಢಿಸಿಕೊಂಡು ಸಿರಿಧಾನ್ಯವನ್ನು ಹೆಚ್ಚು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು. ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಸಾರ್ವಜನಿಕರು ಪಾಶ್ಚಾತ್ಯ ಆಹಾರ ಪದ್ಧತಿ ಗಳಿಗೆ ಮರುಳಾಗಿ ನಮ್ಮ ನಾಡಿನ ಆಹಾರ ಪದ್ಧತಿ ದೂರ ಮಾಡಿ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ. ಸಾವಯವ ಕೃಷಿ ಮೂಲಕ ಬೆಳೆಯುವ ನವಣೆ, ಸಜ್ಜೆ, ರಾಗಿ ಹಾಗೂ ದ್ವಿದಳ ಧಾನ್ಯಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಹಕಾರಿ ಎಂದರು.ಡೊಳ್ಳು ಕುಣಿತ ಮತ್ತು ಗಾರುಡಿ ಗೊಂಬೆಗಳ ನೃತ್ಯದ ಮೂಲಕ ಜಾಥಾ ನಡೆಯಿತು. ಕೃಷಿ ಇಲಾಖೆ ವಾಹನಗಳಲ್ಲಿ ರೈತ ಗೀತೆ, ಜಾಗೃತಿ ಸಂದೇಶಗಳನ್ನು ಭಿತ್ತರಿಸಲಾಯಿತು. ಇದಕ್ಕೂ ಮುನ್ನ ನಗರದ ಜ್ಯುನಿಯರ್ ಕಾಲೇಜು ಆವರಣದಲ್ಲಿ ಸಾಮೂಹಿಕ ಏರೋಬಿಕ್ಸ್ ಹಾಗೂ ಲಘು ವ್ಯಾಯಾಮ ಮಾಡಲಾಯಿತು.ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಜಂಟಿ ಕೃಷಿ ನಿರ್ದೇಶಕಿ ಸುಮಾ, ಕೃಷಿ ಉಪ ನಿರ್ದೇಶಕಿ ಭವ್ಯರಾಣಿ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಆನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಇದ್ದರು.ಪೋಟೋ:
ಕೋಲಾರ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ವತಿಯಿಂದ "ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ " ಜಾಗೃತಿ ಜಾಥಾ ನಗರದಲ್ಲಿ ನಡೆಯಿತು.