ವಿಷಮುಕ್ತ ಆಹಾರಕ್ಕೆ ಸಾವಯವ ಕೃಷಿ ಅಳವಡಿಕೆ ಅಗತ್ಯ: ಸಾವಯವ ಕೃಷಿಕ ಪ್ರವೀಣ್ ಬಾದಾಮಿ ಸಲಹೆ

KannadaprabhaNewsNetwork |  
Published : Apr 28, 2025, 12:50 AM IST
26ಕೆಎಂಎನ್ ಡಿ18,19 | Kannada Prabha

ಸಾರಾಂಶ

ಈಗಿನ ರೈತರು ಸಾವಯವ ಕೃಷಿಯಿಂದ ಇಳುವರಿ ಕಡಿಮೆ, ಲಾಭ ಕಡಿಮೆ ಎನ್ನುತ್ತಾರೆ. ಸ್ವಲ್ಪ ತಾಳ್ಮೆ ವಹಿಸಿದರೆ 3 ವರ್ಷಗಳ ನಂತರ ಒಳ್ಳೆಯ ಇಳುವರಿ, ಲಾಭ ಪಡೆಯಬಹುದು. ರಾಸಾಯನಿಕ ಸಿಂಪಡಣೆ ಮಾಡಿದ ತರಕಾರಿಗಳಿಗೂ, ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ತರಕಾರಿಗಳಿಗೂ ತುಂಬಾ ವ್ಯತ್ಯಾಸವಿದೆ. ಸಾವಯವದಿಂದ ಬೆಳೆದ ತರಕಾರಿಗಳು ತುಂಬಾ ರುಚಿಕರವಾಗಿರುತ್ತವೆ .

ಕನ್ನಡಪ್ರಭ ವಾರ್ತೆ ಹಲಗೂರು

ವಿಷಮುಕ್ತ ಭೂಮಿ ಹಾಗೂ ಆಹಾರಕ್ಕಾಗಿ ಪ್ರತಿಯೊಬ್ಬ ರೈತರೂ ಸಾವಯವ ವ್ಯವಸಾಯಯನ್ನು ಅಳವಡಿಸಿಕೊಳ್ಳಬೇಕು ಎಂದು ಬ್ಯಾಡರಹಳ್ಳಿ ಸಾವಯವ ಕೃಷಿಕ ಪ್ರವೀಣ್ ಬಾದಾಮಿ ತಿಳಿಸಿದರು.

ಗ್ರಾಮದ ತೋಟದಲ್ಲಿ ಮಳವಳ್ಳಿ ಸಾವಯವ ಕೃಷಿಕರ ಸಂಘ ಹಾಗೂ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3191 ಮತ್ತು 3192 ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಾವಯವ ಕೃಷಿ ಕಾರ್ಯಾಗಾರದಲ್ಲಿ ಮಾತನಾಡಿ, ಕಳೆದ 6 ವರ್ಷಗಳಿಂದ ವಿಷಮುಕ್ತ ಭೂಮಿ - ಆಹಾರ ಎಂಬ ಸಂಕಲ್ಪದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕುಟುಂಬದ ಸಹಕಾರದಿಂದ ನನಗೆ ಸಾಧಕ ರೈತ ಎಂಬ ಫಲ ಕೊಟ್ಟಿದೆ ಎಂದರು.

ಭೂಮಿಗೆ ಅತಿಯಾದ ರಸಗೊಬ್ಬರಗಳನ್ನು ಹಾಕಿದ್ದರಿಂದ ಇಂದು ಭೂಮಿ ಸತ್ವ ಕಳೆದುಕೊಂಡಿದೆ. ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಫಲವತ್ತತೆ ಹೆಚ್ಚಿಸಬೇಕಿದೆ. ಇದು ಫಲ ಕೊಡಲು ಸುಮಾರು ಮೂರರಿಂದ ನಾಲ್ಕು ವರ್ಷ ಕಾಲ ಬೇಕಾಗುತ್ತದೆ. ಆ ಸಮಯದಲ್ಲಿ ಇಳುವರಿ ಸ್ವಲ್ಪ ಕಡಿಮೆ ಬರುವುದು ಸಹಜ ಎಂದು ತಿಳಿಸಿದರು.

ಈಗಿನ ರೈತರು ಸಾವಯವ ಕೃಷಿಯಿಂದ ಇಳುವರಿ ಕಡಿಮೆ, ಲಾಭ ಕಡಿಮೆ ಎನ್ನುತ್ತಾರೆ. ಸ್ವಲ್ಪ ತಾಳ್ಮೆ ವಹಿಸಿದರೆ 3 ವರ್ಷಗಳ ನಂತರ ಒಳ್ಳೆಯ ಇಳುವರಿ, ಲಾಭ ಪಡೆಯಬಹುದು. ರಾಸಾಯನಿಕ ಸಿಂಪಡಣೆ ಮಾಡಿದ ತರಕಾರಿಗಳಿಗೂ, ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ತರಕಾರಿಗಳಿಗೂ ತುಂಬಾ ವ್ಯತ್ಯಾಸವಿದೆ. ಸಾವಯವದಿಂದ ಬೆಳೆದ ತರಕಾರಿಗಳು ತುಂಬಾ ರುಚಿಕರವಾಗಿರುತ್ತವೆ ಎಂದು ಹೇಳಿದರು.

ನನ್ನ ಆರು ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ. ನನ್ನ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿದೆ. ಈಗ ನನ್ನ ಹಿಂದೆ ಹತ್ತು ಜನ ರೈತರು ಸಾವಯವ ಕೃಷಿಗೆ ತೊಡಗಿಸಿಕೊಂಡಿದ್ದಾರೆ. ಎಲ್ಲಾ ರೈತರು ಕೂಡ ಸಾವಯವ ಕೃಷಿಯತ್ತ ತೊಡಗಬೇಕು ಎಂದು ಕರೆ ನೀಡಿದರು.

ಮತ್ತೋರ್ವ ಸಾವಯವ ಕೃಷಿ ಸಾಧಕ ವಿಶಾಲ್ ಮಾತನಾಡಿ, ಯುವ ಪೀಳಿಗೆಗೆ ಪೋಷಕರು ಈಗಿನಿಂದಲೇ ಕೃಷಿ ಬಗ್ಗೆ ತಿಳಿವಳಿಕೆ ನೀಡಬೇಕು. ಉತ್ತಮ ಪರಿಸರಕ್ಕಾಗಿ ಗಿಡ- ಮರಗಳನ್ನು ಹೆಚ್ಚು ನೆಡಬೇಕು. ಸಾವಯವ ಗೊಬ್ಬರದಿಂದ ತಯಾರಿಸಿದ ಆಹಾರ ಪಾದಾರ್ಥಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.

ಮಳವಳ್ಳಿ ತಾಲೂಕು ಗೌಡಗೆರೆ ಗ್ರಾಮದ ಪರಮೇಶ್ ಮಾತನಾಡಿ, ಸಾವಯವ ಕೃಷಿಗೆ ಜೀವಾಮೃತ ಬಳಸಿದರೆ ರೇಷ್ಮೆ ಗೂಡಿನ ಇಳುವರಿ ಪಡೆಯಬಹುದು ಎಂಬುದನ್ನು ತಿಳಿದು ಸುಮಾರು 190 ರೇಷ್ಮೆ ಹುಳುಗಳಿಗೆ 270 ಕೆಜಿ ರೇಷ್ಮೆ ಗೂಡು ಪಡೆಯುವ ನಿರೀಕ್ಷೆ ಇದೆ. ನನ್ನ ಹಿಪ್ಪುನೇರಳೆ ತೋಟಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿ ಒಂದು ವರ್ಷ ಕಳೆದಿದೆ, ಯಾವ ರಾಸಾಯನಿಕ ಸಿಂಪಡಣೆ ಮಾಡಿಲ್ಲ. ಕೇವಲ ಜೀವಾಮೃತ ನೀಡುತ್ತಿದ್ದೇನೆ. ಬೆಳೆಗೆ ಯಾವ ರೋಗ ಬಾಧೆ ಇಲ್ಲದೆ ತುಂಬಾ ಸೊಗಸಾಗಿದೆ ಎಂದರು.

ಮಳವಳ್ಳಿ ತಾಲೂಕಿನಲ್ಲಿ ಮುಕ್ಕಾಲು ಭಾಗ ರೈತರು ರೇಷ್ಮೆ ಬೆಳೆ ಅವಲಂಬಿತರಾಗಿದ್ದಾರೆ. ಅವರೆಲ್ಲರೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!