ರೈತರಿಗೆ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸಲು ಸಾವಯವ ಸಂತೆಗೆ ಚಾಲನೆ

KannadaprabhaNewsNetwork |  
Published : Jun 03, 2026, 01:45 AM IST
2ಕೆಎಂಎನ್ ಡಿ23,24 | Kannada Prabha

ಸಾರಾಂಶ

ಸಾವಯವ ಕೃಷಿ ಎಂದರೆ ದೊಡ್ಡದೇನಲ್ಲ. ಈ ಹಿಂದೆ ನಮ್ಮಪೂರ್ವಿಕರು ಯಾವುದೇ ರಾಸಾಯನಿಕವನ್ನು ಬಳಕೆ ಮಾಡದೆಯೇ ಬರೀ ತಿಪ್ಪೆ ಗೊಬ್ಬರ ಹಾಕಿ ಬೆಳೆಯುದ್ದ ಬೇಸಾಯ ಪದ್ಧತಿಯೇ ಸಾವಯವ ಕೃಷಿಯಾಗಿದೆ. ಈ ಮುಖಾಂತರ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯ ಸರ್ಕಾರ ಸಾವಯವ ತಾಲೂಕು ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರೈತರಿಗೆ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸಾವಯವ ಬೇಸಾಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಪಟ್ಟಣದಲ್ಲಿ ಸಾವಯವ ಸಂತೆಗೆ ಚಾಲನೆ ನೀಡಲಾಯಿತು.

ಪಟ್ಟಣದ ತಾಪಂ ಆವರಣದಲ್ಲಿ ಆರಂಭಗೊಂಡ ಸಾವಯವ ಸಂತೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು. ಸಾವಯವ ಬೇಸಾಯ ಪದ್ಧತಿ ಮೂಲಕ ಬೆಳೆದ ತರಕಾರಿ, ಹಣ್ಣುಗಳು, ಧಾನ್ಯಗಳನ್ನು ಸಂತೆಯಲ್ಲಿ ಮಾರಾಟ ಮಾಡಲಾಯಿತು. ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ರೈತರು ತಾವು ಬೆಳೆದ ತರಕಾರಿ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ರೈತರು ಹಾಗೂ ಸಾರ್ವಜನಿಕರಿಗೆ ಸಾವಯವ ಬೇಸಾಯದ ಬಗ್ಗೆ ಅರಿವು ಮೂಡಿಸಿದರು.

15 ದಿನಕ್ಕೊಮ್ಮೆ ಸೋಮವಾರ ತಾಪಂ ಆವರಣದಲ್ಲಿ ಸಾವಯವ ಸಂತೆ ನಡೆಸಲು ತೀರ್ಮಾನಿಸಲಾಗಿದ್ದು, ರೈತರು ಸಾವಯವ ಬೇಸಾಯ ಮಾಡಿ ಬೆಳೆದ ಬೆಳೆಗಳು, ಹಣ್ಣು, ಧಾನ್ಯಗಳನ್ನು, ಬೆಲ್ಲ, ಸಿಹಿತಿಂಡಿ ತಿನ್ನಿಸ್ಸು, ಸೋಪ್ಪು-ತರಕಾರಿಗಳನ್ನು ಮಾರಾಟ ಮಾಡಬಹುದಾಗಿದೆ.

ಸಾವಯವ ಸಂತೆ ಬೆಳಗೂಳದ ರೈತ ಡಾ.ರಾಮಕೃಷ್ಣ ಅವರು ಸುಮಾರು 71 ತಳಿಯ ಮಾತುಗಳನ್ನು ತಂದು ಪ್ರದರ್ಶನಕ್ಕಿಟ್ಟಿದ್ದರು. ಅದರಲ್ಲಿ ಜಪಾನ್ ದೇಶದ ತಳಿಯಾದ ಮಿಯಾಜಾಕಿ ಎಂಬ ವಿಶೇಷ ತಳಿ ಪ್ರದರ್ಶನ ಮಾಡಿದ್ದರು. ಅಲ್ಲದೇ, ವಿವಿಧಡೆಯಿಂದ ಆಗಮಿಸಿದ್ದ ರೈತರು ಸಾವಯವ ಬೇಸಾಯದ ಮುಖಾಂತರ ಬೆಳೆದ ಭತ್ತ, ರಾಗಿ, ವಿವಿಧ ಧಾನ್ಯಗಳು, ಬೆಲ್ಲ, ಸಿಹಿತಿಂಡಿ, ಅಲಸು,ಮಾವು, ಬಾಳೆಹಣ್ಣು, ತರಕಾರಿಗಳು, ಸೋಪ್ಪುಗಳನ್ನು ಸಹ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.

ಮುಂದಿನ ದಿನಗಳಲ್ಲಿ ಸಾವಯವ ಪದಾರ್ಥಗಳನ್ನು ಮಾರಾಟ ಮಾಡುವ ರೈತರು ಹಾಗೂ ಅದನ್ನುಕೊಳ್ಳುವ ಗ್ರಾಹಕರ ಸಂಖ್ಯೆ ಹೆಚ್ಚಾದರೆ ಬೇರೆಡೆಗೆ ಸ್ಥಳಾಂತರ ಮಾಡಲು ಸಹ ಚಿಂತನೆ ಮಾಡಲಾಗಿದೆ.

ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸರ್ಕಾರ ಪಾಂಡವಪುರವನ್ನು ಸಾವಯವ ತಾಲೂಕು ಎಂಬುದಾಗಿ ಘೋಷಣೆ ಮಾಡಿದೆ. ಹಾಗಾಗಿ ನಮ್ಮ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಾವಯವ ಕೃಷಿಯ ಕಡೆಗೆ ಮುಖ ಮಾಡಬೇಕು ಎಂದು ಮನವಿ ಮಾಡಿದರು.

ಸಾವಯವ ಕೃಷಿ ಎಂದರೆ ದೊಡ್ಡದೇನಲ್ಲ. ಈ ಹಿಂದೆ ನಮ್ಮಪೂರ್ವಿಕರು ಯಾವುದೇ ರಾಸಾಯನಿಕವನ್ನು ಬಳಕೆ ಮಾಡದೆಯೇ ಬರೀ ತಿಪ್ಪೆ ಗೊಬ್ಬರ ಹಾಕಿ ಬೆಳೆಯುದ್ದ ಬೇಸಾಯ ಪದ್ಧತಿಯೇ ಸಾವಯವ ಕೃಷಿಯಾಗಿದೆ. ಈ ಮುಖಾಂತರ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ನಮ್ಮ ತಾಲೂಕನ್ನು ಸಾವಯವ ತಾಲೂಕು ಎಂಬುದಾಗಿ ಘೋಷಣೆ ಮಾಡಿದ ಸಾಕಷ್ಟು ಕಂಪನಿಗಳು ನನ್ನೊಂದಿಗೆ ಚರ್ಚಿಸಿ ಅಗ್ರಿಮೆಂಟ್ ಮಾಡಿಕೊಳ್ಳಲು ಮುಂದೆ ಬರುತ್ತಿವೆ ಎಂದರು.

ರೈತರು ಸ್ವಾವಲಂಬಿ ಬದುಕು ನಡೆಸುವ ಜತೆಗೆ ಆರ್ಥಿಕವಾದ ಸುಭದ್ರ ಬದುಕು ಕಟ್ಟಿಕೊಳ್ಳಬೇಕಾದರೆ ಸಾವಯವ ಕೃಷಿ ಅಗತ್ಯತೆ ಇದೆ. ಮನುಷ್ಯರ ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿಯ ಕಡೆಗೆ ಮುಖಮಾಡಿ ರೈತರಿಗೆ ಕಿವಿಮಾತು ಹೇಳಿದರು.

ಕಾಲಕಾಲಕ್ಕೆ ಮಣ್ಣಿನ ಫಲವತ್ತತೆ ಪರೀಕ್ಷಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂನಲ್ಲೂ ಬಯೋ ರಿಸರ್ಚ್ ಸೆಂಟರ್ ಆರಂಭಿಸಬೇಕು ಎನ್ನುವ ಚಿಂತನೆ ಇದೆ. ಪ್ರತಿ ಸೊಸೈಟಿಯಲ್ಲಿ ಸಾವಯವ ಬಿತ್ತನೆ ಬೀಜಗಳ ಮಾರಾಟ ಮಾಡಲು ಸಹ ಕ್ರಮವಹಿಸಲಾಗುತ್ತಿದೆ ಎಂದರು.

ಈ ವೇಳೆ ತಾಪಂ ಇಓ ವೀಣಾ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪನಿತಿನ್, ಪುರಸಭೆ ನಾಮಿನಿ ಸದಸ್ಯ ಮುರುಳಿ ಸೇರಿದಂತೆ ಅನೇಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಚಿವ ಸ್ಥಾನ ಸಿಗಲೆಂದು ಆಶಿಸಿ ವಿಶೇಷ ಪೂಜೆ
ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಿ: ಕೆ.ಆರ್.ನಂದಿನಿ