ಸಂಘಟನೆ, ಮೀಸಲಾತಿಯಿಂದ ಸಮಾಜಾಭಿವೃದ್ಧಿ; ಕೂಡಲಸಂಗಮ ಶ್ರೀ

KannadaprabhaNewsNetwork |  
Published : Sep 19, 2024, 01:45 AM IST
ಉದ್ಘಾಟನೆ | Kannada Prabha

ಸಾರಾಂಶ

ಸೆ. 22ರಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ವಕೀಲರ ಮುಖಾಂತರ ಕರ ಸಂದೇಶ ಹೋರಾಟ ಮಾಡಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳ ಮೂಲಕ ಮೀಸಲಾತಿ ಪತ್ರ ಚಳವಳಿ ನಡೆಸಲಾಗುವುದು ಎಂದು ಶ್ರೀಗಳು ಹೇಳಿದರು.

ನವಲಗುಂದ:

ಸಂಘಟನೆಯಿಂದ ಮಾತ್ರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಮುಂದಿನ ಪೀಳಿಗೆಗೆ ಸೌಲಭ್ಯ ಸಿಗಲು ಸಾಧ್ಯ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀ ಹೇಳಿದರು.

ಪಟ್ಟಣದ ವೀರಶೈವ ಲಿಂಗಾಯತ ಸಮುದಾಯದ ಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಗ್ರಾಮಮಟ್ಟದಲ್ಲೂ ಸಮಾಜ ಬಾಂಧವರು ಸಂಘಟಿತರಾಗಬೇಕು. ಈ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಕಟಿಬದ್ಧರಾಗಬೇಕು ಎಂದು ಸಲಹೆ ನೀಡಿದರು.

ಸೆ. 22ರಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ವಕೀಲರ ಮುಖಾಂತರ ಕರ ಸಂದೇಶ ಹೋರಾಟ ಮಾಡಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳ ಮೂಲಕ ಮೀಸಲಾತಿ ಪತ್ರ ಚಳವಳಿ ನಡೆಸಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಪಂಚಮಸಾಲಿ ಪಂಗಡ ಬೆಳಕಿಗೆ ಬಂದಿದ್ದು ಸಂಘಟನೆಯಿಂದ. ಸಮಾಜ ಸಂಘಟನೆಗೆ ಯಾವುದೇ ಪಕ್ಷವಿಲ್ಲ. ಇಲ್ಲಿ ಸಮಾಜ ಮುಖ್ಯ. ಆರ್ಥಿಕ, ಔದ್ಯೋಗಿಕವಾಗಿ ಸದೃಢವಾಗಿರುವ ನಮ್ಮವರು ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತರಾಗಬೇಕು. ಸರ್ಕಾರದ ಉನ್ನತ ಹುದ್ದೆ ಪಡೆಯಲು ಸಹಕರಿಸಬೇಕು ಎಂದರು.

ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಬ್ರಿಟಿಷರನ್ನು ಬಗ್ಗು ಬಡಿದ ಚೆನ್ನಮ್ಮ ಕುಲದವರಾದ ನಾವು ತಲೆ ಎತ್ತಿ ನಿಲ್ಲುವರು. ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ದುಡಿಯೋಣ. ಸಮಾಜ ಸಹಕಾರದಿಂದ ನಗರದಲ್ಲಿ ಭವ್ಯ ಕಲ್ಯಾಣ ಮಂಟಪ ಲೋಕಾರ್ಪಣೆಯಾಗುತ್ತಿದೆ. ಸಮಾಜದ ಮಕ್ಕಳು ಹೆಚ್ಚು ಓದಿ ಐಎಎಸ್, ಐಪಿಎಸ್ ಅಂತ ದೊಡ್ಡ ದೊಡ್ಡ ಸ್ಥಾನ ಮಾಡಬೇಕೆಂದು ಕರೆ ನೀಡಿದರು.

ಸಮಾಜದ ಮುಖಂಡರಾದ ವಿಜಯ ಕುಲಕರ್ಣಿ, ಬಾಬುಗೌಡ ಪಾಟೀಲ ಮಾತನಾಡಿದರು. ಶಂಕರಗೌಡ ಬಾಳನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಸಮಾಜದ ವಿದ್ಯಾರ್ಥಿಗಳಿಂದ ತಹಸೀಲ್ದಾರ್‌ಗೆ 2ಎ ಮೀಸಲಾತಿಗಾಗಿ ಪತ್ರ ಚಳವಳಿಯ ಪತ್ರ ನೀಡಿ ಮನವಿ ಮಾಡಿದರು. ನಂತರ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಾಜಿ ಶಾಸಕ ಆರ್.ಬಿ. ಶಿರಿಯಣ್ಣವರ, ಸುರೇಶ ಕಮ್ಮಾರ, ಸದುಗೌಡ ಪಾಟೀಲ, ನಿಂಗಣ್ಣ ಕರಿಕಟ್ಟಿ, ವಿಜಯಲಕ್ಷ್ಮಿ ಪಾಟೀಲ, ಮಲ್ಲಿಕಾರ್ಜುನ ಹಿರೇಕೊಪ್ಪ, ಎಲ್.ಬಿ. ಪಾಟೀಲ, ರಾಮನಗೌಡ ಪಾಟೀಲ, ಮಲ್ಲಪ್ಪ ಕಿರೇಸೂರ, ಕೆ.ಬಿ.ಮದ್ನೂರ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ