ಬ್ಯಾಡಗಿ: ವಿಶ್ವವಿಖ್ಯಾತ ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ಮೂಲತಳಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನಿಗಳು ಸೇರಿದಂತೆ ತಾಂತ್ರಿಕ ಸಲಹಾ ಸಮಿತಿ ಹಾಗೂ ವ್ಯಾಪಾರಸ್ಥರ ಸಭೆ ಆಯೋಜಿಸುವಂತೆ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರು, ಕೃಷಿ ಮಾರಾಟ ಇಲಾಖೆ ಸಚಿವ ಶಿವಾನಂದ ಪಾಟೀಲ ಅವರನ್ನು ಒತ್ತಾಯಿಸಿದ್ದಾರೆ.
ಹೈಬ್ರೀಡ್ ಬೀಜ ಅನಿವಾರ್ಯವಾಗಿದೆ: ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ತಳಿ ಹೋಲುವಂತಹ ನೂರಾರು ಹೈಬ್ರೀಡ್ ತಳಿಗಳು ಮಾರುಕಟ್ಟೆಯಲ್ಲಿ ಪರಿಚಯವಾಗಿವೆ. ಆದರೆ ಅವುಗಳಲ್ಲಿ ಗುಣ, ರುಚಿ ಮತ್ತು ಬಣ್ಣ ಹೋಲುವಂತಹ ಯಾವುದೇ ತರಹದ ಲಕ್ಷಣಗಳಿಲ್ಲ. ಹೀಗಾಗಿ ಬ್ಯಾಡಗಿ ಕಡ್ಡಿ ಎನ್ನುತ್ತಲೇ ಮಾರುಕಟ್ಟೆಯಲ್ಲಿ ಅದೆಷ್ಟೋ ಗ್ರಾಹಕರು ಮೋಸ ಹೋಗುತ್ತಿದ್ದಾರೆ.
ಪ್ರಮುಖ ಬೆಳೆಯಾಗಿದೆ: ಕಲ್ಯಾಣ ಮತ್ತು ಕಿತ್ತೂರ ಕರ್ನಾಟಕದ ಸುಮಾರು 10ರಿಂದ 12 ಜಿಲ್ಲೆಗಳಲ್ಲಿ ಮೆಣಸಿನಕಾಯಿ ಇದೀಗ ಪ್ರಮುಖ ಬೆಳೆಯಾಗಿದೆ. ಹೀಗಾಗಿ ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ಬೆಳೆಯುವ ರೈತರನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದ್ದು ಮೂಲತಳಿ ಬೀಜವನ್ನು ರೈತರಿಗೆ ಒದಗಿಸಿದಲ್ಲಿ ಲಾಭದಾಯಕ ಕೃಷಿ ನಡೆಸಲಿದ್ದಾರೆ.ಕೃಷಿ ಮೇಲಿನ ವೆಚ್ಚಕ್ಕೆ ಬೆದರಿರುವ ರೈತರು: ಅನಿವಾರ್ಯವಾಗಿ ಹೈಬ್ರೀಡ್ ಬೀಜಗಳನ್ನು ಬಳಕೆ ಮಾಡುತ್ತಿರುವ ರೈತರು ಬೆಳೆಗೆ ಗೊಬ್ಬರ ಔಷಧಿಗಳನ್ನು ಬಳಕೆ ಮಾಡುತ್ತಿರುವುದನ್ನು ನೋಡಿದರೇ, ಅದನ್ನು ತಿನ್ನುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಹೀಗಾಗಿ ನಮ್ಮ ಬ್ಯಾಡಗಿ ಮೂಲತಳಿಗೆ ಇದ್ಯಾವುದರ ಅವಶ್ಯಕತೆ ಇಲ್ಲದೇ ಇರುವುದರಿಂದ ಮತ್ತು ನಮ್ಮ ಬ್ಯಾಡಗಿ ತಳಿಯ ಹೆಸರನ್ನು ಬೇರೊಬ್ಬರು ಬಳಕೆ ಮಾಡಿಕೊಳ್ಳುತ್ತಿದ್ದು ಬ್ಯಾಡಗಿ ತಳಿಯ ಅಸ್ತಿತ್ವಕ್ಕೂ ಧಕ್ಕೆ ತರಲಾರಂಭಿಸಿದ್ದಾರೆ.
ಸಭೆಯನ್ನು ಆಯೋಜಿಸಿ: ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ಮೂಲತಳಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನಿಗಳು ಸೇರಿದಂತೆ ತಾಂತ್ರಿಕ ಸಲಹಾ ಸಮಿತಿ ಹಾಗೂ ವ್ಯಾಪಾರಸ್ಥರ ಸಭೆಯನ್ನು ಮಾನ್ಯ ಸಚಿವರು ಆದಷ್ಟು ಶೀಘ್ರದಲ್ಲಿ ಆಯೋಜಿಸುವ ಮೂಲಕ ಸಂಶೋಧನಾ ಕೇಂದ್ರಗಳ ಕುಂದು ಕೊರತೆಗಳನ್ನು ಆಲಿಸಬೇಕು ಮತ್ತು ಬರುವ ದಿನಗಳಲ್ಲಿ ಪಾರಂಪರಿಕವಾದ ತಳಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಗ್ರ ವರದಿಯೊಂದನ್ನು ಸಲ್ಲಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.