ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳ ನೂತನ ಅಧ್ಯಕ್ಷರು ತಮ್ಮ ಜಿಲ್ಲೆಗಳ ವ್ಯಾಪ್ತಿಯ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ.ಬುಧವಾರ ಪಕ್ಷದ ಕಚೇರಿಯಲ್ಲಿ ನೂತನ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆ ನಡೆಯಿತು. ಇದೇ ವೇಳೆ ಎಲ್ಲ ಜಿಲ್ಲಾಧ್ಯಕ್ಷರಿಗೆ ನಿಯುಕ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ವೇಗ ಪಡೆಯಬೇಕು ಎಂಬ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ನೂತನ ಜಿಲ್ಲಾಧ್ಯಕ್ಷರಿಗೆ ಮಾರ್ಗದರ್ಶನ ಮಾಡಿದ್ದಾರೆ. ಮುಂಬರುವ ಸವಾಲುಗಳು, ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯಾಧ್ಯಕ್ಷರು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳಿದರು.ಗ್ರಾಪಂ ಚುನಾವಣೆಯಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಬೂತ್ ಮಟ್ಟದಿಂದ ಜಿಲ್ಲಾ ತಂಡದ ಪಾತ್ರ ಯಾವ ರೀತಿ ಇರಬೇಕೆಂಬ ಕುರಿತು ಸಲಹೆ- ಸೂಚನೆಗಳನ್ನು ಕೊಡಲಾಗಿದೆ. ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ದುರಾಡಳಿತವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಾಲ್ಮೀಕಿ ನಿಗಮದ ಹಗರಣದಿಂದ ಆರಂಭಿಸಿ ಮುಡಾ ಹಗರಣ ಸಂಬಂಧವೂ ಪಾದಯಾತ್ರೆ ನಡೆಸಲಾಗಿದೆ. ಜನಾಕ್ರೋಶ ಯಾತ್ರೆ ಮೂಲಕ ಸರ್ಕಾರದ ವೈಫಲ್ಯವನ್ನು ಜನಸಾಮಾನ್ಯರಿಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಬಗ್ಗೆ ಜನಜಾಗೃತಿ ಮಾಡಲು ಸೂಚನೆ ಪಕ್ಷದಿಂದ ಕೈಗೊಳ್ಳಬೇಕಾದ ಹೋರಾಟಗಳಿಗೆ ಮತ್ತಷ್ಟು ಚುರುಕು ಕೊಡಲು ತೀರ್ಮಾನಿಸಲಾಗಿದೆ ಎಂದರು.
ಮೈತ್ರಿ ಬಗ್ಗೆ ಚಿಂತಿಸಬೇಡಿ-ವಿಜಯೇಂದ್ರ:ಇದೇ ವೇಳೆ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಥವಾ ಸೀಟು ಹಂಚಿಕೆ ಇತ್ಯಾದಿ ವಿಷಯಗಳ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ.
ನಮ್ಮ ಪಾಡಿಗೆ ನಾವು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವತ್ತ ಗಮನಹರಿಸೋಣ. ಮುಂದೆ ಆಯಾ ಕಾಲಕ್ಕೆ ಏನು ತೀರ್ಮಾನ ಆಗಬೇಕೋ ಅದು ಆಗುತ್ತದೆ. ಮೈತ್ರಿ, ಸೀಟು ಹಂಚಿಕೆ ಬಗ್ಗೆ ನಿಮಗೆ ಗೊಂದಲ ಅಥವಾ ಆತಂಕ ಬೇಡ ಎಂಬ ಮಾತನ್ನು ಸ್ಪಷ್ಟಪಡಿಸಿದರು ಎಂದು ತಿಳಿದು ಬಂದಿದೆ.ಬಾಕ್ಸ್...
15 ದಿನಗಳಲ್ಲಿ ಒಳ್ಳೆಯತಂಡ ಕಟ್ಟಲು ಸಲಹೆ
ಜಿಲ್ಲಾಮಟ್ಟದಲ್ಲಿ ಒಳ್ಳೆಯ ಮುಖಂಡರ ತಂಡ ಕಟ್ಟಿ. ಆ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಿ. ಎಲ್ಲವನ್ನೂ 15 ದಿನಗಳಲ್ಲಿ ಮಾಡಿ ಮುಗಿಸಿ ಎಂದು ಇದೇ ವೇಳೆ ವಿಜಯೇಂದ್ರ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.ಜಿಲ್ಲಾ ಸಮಿತಿ, ಬೂತ್ ಸಮಿತಿ, ಮಂಡಲ ಸಮಿತಿಗಳಿಗೆ ಅನುಭವ ಹೊಂದಿದವರನ್ನು ಪರಿಗಣಿಸಿ. ಸಂಸದರು ಅಥವಾ ಶಾಸಕರು ಒತ್ತಡ ಹಾಕಿದರು ಎಂಬ ಕಾರಣಕ್ಕಾಗಿ ನೇಮಕ ಮಾಡಬೇಡಿ. ಹಾಗೊಂದು ವೇಳೆ ಯಾರಾದರೂ ಒತ್ತಡ ಹಾಕಿದರೆ ನನ್ನ ಗಮನಕ್ಕೆ ತನ್ನಿ. ನಾನು ಅವರ ಜತೆ ಮಾತನಾಡುತ್ತೇನೆ ಎಂದು ಹೇಳಿದರು ಎನ್ನಲಾಗಿದೆ.
ಮಾಜಿ ಸಚಿವ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ರಾಜ್ಯ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಜ್ಯ ಪದಾಧಿಕಾರಿಗಳು ಮತ್ತು ಎಲ್ಲ ನೂತನ ಜಿಲ್ಲಾಧ್ಯಕ್ಷರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.