ಶಿಗ್ಗಾಂವಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿ-ಯುವಜನರ ಮುಂದಾಗಬೇಕು ಎಂದು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಎಂದರು.
ಇಲ್ಲಿಯ ಎಸ್‌ಬಿಬಿಎಂಡಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕಿಗಾಗಿ, ತಾಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಎಸ್ಎಫ್ಐನ ೫ನೇ ಕಾರ್ಯಕ್ರಮ, ಶಿಗ್ಗಾಂವಿ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರ ಜವಾಬ್ದಾರಿಗೆ ಒಪ್ಪಿಸುತ್ತಿದೆ. ಸಂಕಷ್ಟದಲ್ಲಿರುವ ಬಡವರನ್ನು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ಸಾಲ ತರುವ ಕೇಂದ್ರ ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುವುದಕ್ಕಾಗಿ ಸಂಘರ್ಷ, ಹೋರಾಟಗಳನ್ನು ನಡೆಸಲಾಗಿದೆ. ಸರ್ಕಾರಿ ಶಾಲಾ-ಕಾಲೇಜ್ ವಿಶ್ವವಿದ್ಯಾಲಯ, ಹಾಸ್ಟೆಲ್‌ಗಳನ್ನು ಬಲಗೊಳಿಸುವಂತೆ ಒತ್ತಾಯಿಸಿ ಹೋರಾಟಗಳನ್ನು ನಡೆಸಬೇಕಿದೆ. ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದಂತೆ ಶಿಕ್ಷಣ ವ್ಯಾಪಾರ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಪ್ರಾಚಾರ್ಯ ಆರ್.ಎಸ್. ಭಟ್ ಮಾತನಾಡಿ, ಎಸ್ಎಫ್ಐ ವಿದ್ಯಾರ್ಥಿ ಚಳವಳಿಯು ವಿದ್ಯಾರ್ಥಿಗಳ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಪರವಾಗಿ ಹೀಗೆ ನಿರಂತರವಾಗಿ ಚಳವಳಿ ರೂಪಿಸುವ ಸಂಘಟನೆಯ ನ್ಯಾಯಯುತ ಬೇಡಿಕೆಗಳು ಈಡೇರಲಿ ಎಂದು ಶುಭ ಕೋರಿದರು.ಮುಖ್ಯೋಪಾಧ್ಯಾಯ ಕೆ.ಬಿ. ಚೆನ್ನಪ್ಪ ಮಾತನಾಡಿ, ತಾಲೂಕಿನಲ್ಲಿ ಬಸ್ ಸಮಸ್ಯೆ ವಿಪರೀತವಾಗಿದ್ದು, ಅಧಿಕಾರಿಗಳು ಪರಿಹಾರ ಒದಗಿಸಬೇಕು. ಎಸ್ಎಫ್ಐ ವಿದ್ಯಾರ್ಥಿ ಚಳವಳಿ ಕೇವಲ ಹೋರಾಟ ಮಾಡುವುದು ಅಷ್ಟೇ ಅಲ್ಲ, ನಾಯಕತ್ವ ಗುಣ ಬೆಳೆಸುತ್ತದೆ ಎಂದರು.
ಸಮ್ಮೇಳನದ ಮುಂಚಿತವಾಗಿ ಚನ್ನಪ್ಪ ಕುನ್ನೂರ ವಿದ್ಯಾಲಯದಿಂದ ಎಸ್‌ಬಿಬಿಎಂಡಿ ಕಾಲೇಜಿನ ವರೆಗೆ ಮೆರವಣಿಗೆ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳು ಆಗಮಿಸಿದರು.