- ಶ್ರಾವಣ ಮಾಸದ ಸ್ಮರಣೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀ ಬಸವ ಮಾಚಿದೇವ ಸ್ವಾಮೀಜಿ
ಹಸಿವು, ಅವಮಾನಕ್ಕೆ ಒಳಗಾದವರು ಹೋರಾಟದಿಂದ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದಾಗಿದೆ. ಮಡಿವಾಳ ಸಮಾಜ ಬಾಂಧವರು ಸಹ ಸಂಘಟಿತ ಹೋರಾಟದ ಮೂಲಕ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ನುಡಿದರು.
ವಿನೋಬ ನಗರದ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮಡಿವಾಳ ಮಾಚಿದೇವ ಸಮಾಜ ಸಂಘಟನೆಯಲ್ಲಿ ಹಿಂದುಳಿಯಲು ಹೋರಾಟದ ಮನೋಭಾವ ಕಡಿಮೆ ಇರುವುದೂ ಒಂದು ಕಾರಣ. ಸಮಾಜದಲ್ಲಿ ಅನೇಕ ದಾರ್ಶನಿಕರು, ಮಹನೀಯರು ತಮ್ಮನ್ನು ತಾವು ಸುಟ್ಟುಕೊಂಡು, ಜಗತ್ತಿಗೆ, ಜನರಿಗೆ ಬೆಳಕು ನೀಡಿದ್ದಾರೆ. ಮಡಿವಾಳ ಮಾಚಿದೇವರು ನಮ್ಮ ಕುಲದ ತಿಲಕರು. ಅಂತಹವರಿಗೆ ಸಮಾಜಕ್ಕೆ ಹೆಸರು ಬಂದಿದೆ. ಹಣ ಗಳಿಕೆ ಜೊತೆ ಜ್ಞಾನದ ಶಕ್ತಿ ನೀಡಿರುವ ಕಾರಣಕ್ಕೆ ಮಾಚಿದೇವರು ಸದಾ ಪ್ರಾತಃಸ್ಮರಣೀಯರಾಗಿದ್ದಾರೆ. ಶ್ರೀ ಮಡಿವಾಳ ಮಾಚಿದೇವರು ನಮ್ಮ ಕುಲದ ಉದ್ಧಾರಕರು. ಹಾಗಾಗಿ ಮಾಚಿದೇವರನ್ನು ನಾವೆಲ್ಲರೂ ಪೂಜಿಸಬೇಕು ಎಂದು ತಿಳಿಸಿದರು.
ಮಡಿವಾಳ ಸಮಾಜಕ್ಕೆ ಮಾಚಿದೇವರು ನೀಡಿರುವ ಪ್ರತಿ ವಚನದಲ್ಲೂ ಜೀವನದ ಅನುಭವ ಮತ್ತು ಮಾರ್ಗದರ್ಶನ ಕಾಣಬಹುದು. ಹಾಗಾಗಿಯೇ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು. ಬಸವಾದಿ ಶರಣರು, ಕಾಯಕ ಮತ್ತು ದಾಸೋಹ, ಧ್ಯಾನ, ಶಿವಯೋಗ ಮಾಡು ಎಂಬುದಾಗಿ ಮಾಚಿದೇವರು ಸಂದೇಶ ನೀಡಿದ್ದಾರೆ. ಸಂಸ್ಕಾರದಲ್ಲಿ ಬದುಕುವ ಕೆಲಸವನ್ನು ಮುಖ್ಯವಾಗಿ ಮಾಚಿದೇವರು ಮಾಡಿದವರು ಎಂದು ಸ್ಮರಿಸಿದರು.
ಸಮಾಜದ ಮುಖಂಡ ಆವರಗೆರ ಎಚ್.ಜಿ. ಉಮೇಶ ಮಾತನಾಡಿ, ಮಡಿವಾಳ ಸಮಾಜದ ಮಕ್ಕಳು ನಿರೀಕ್ಷಿತ ಮಟ್ಟದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮುದಾಯದ ಬಹುತೇಕರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಔದ್ಯೋಗಿಕವಾಗಿ ಹಿಂದುಳಿದಿದ್ದಾರೆ. ಉನ್ನತ ಶಿಕ್ಷಣ ಪಡೆದು, ಉನ್ನತ ಹುದ್ದೆಯನ್ನಲಂಕರಿಸಲು ಅನುಕೂಲವಾಗುವಂತೆ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು. ಇದಕ್ಕಾಗಿ ನಮ್ಮ ಸಮುದಾಯ ದಶಕಗಳಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದರು.
ಮೂಡಬಿದಿರೆಯ ಶ್ರೀ ಕ್ಷೇತ್ರ ಕಾರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಎಂ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಪಾಲಿದೆ ಸದಸ್ಯ ಎ.ನಾಗರಾಜ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸುರೇಶ ಕೋಗುಂಡೆ, ರೈತ ಮುಖಂಡ ನಿಟುವಳ್ಳಿ ಅಂಜಿನಪ್ಪ ಪೂಜಾರ್, ಎಂ.ಎನ್.ಬಸವರಾಜಪ್ಪ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್. ಮಹಾಂತೇಶ ಇತರರು ಇದ್ದರು.
- ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕಾರಿಂಜೆ, ಮೂಡಬಿದಿರೆ
- ದಿನೇಶ ಕೆ. ಶೆಟ್ಟಿ, ಅಧ್ಯಕ್ಷ, ದೂಡಾ
ದಾವಣಗೆರೆಯಲ್ಲಿ ಸೋಮವಾರ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.