- ಐಆರ್ ಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಅಕಾಡೆಮಿ ನಾಸಿನ್
ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಐಆರ್ ಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ನಾಸಿನ್ (ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಇಂಡೈರೆಕ್ಟ್ ಟ್ಯಾಕ್ಸಸ್ ಮತ್ತು ನಾರ್ಕೋಟಿಕ್ಸ್) ಸಾಕಾರಕ್ಕೆ ಕರ್ನಾಟಕ ಮೂಲದ ಐಆರ್ ಎಸ್ ಅಧಿಕಾರಿ ನಾರಾಯಣಸ್ವಾಮಿ ಅವರು ಶ್ರಮಿಸಿದ್ದಾರೆ.
ಕರ್ನಾಟಕದ ಅಂಚಿನಲ್ಲಿ ಆಂಧ್ರಪ್ರದೇಶದ ಪಾಲಾಸಮುದ್ರಂನಲ್ಲಿ ಸ್ಥಾಪಿತವಾದ ನಾಸಿನ್ ಅಕಾಡೆಮಿಯು ಭಾರತದಲ್ಲೇ ಇದೀಗ ವಿಶಾಲ ಹಾಗೂ ಶ್ರೀಮಂತ ತಂತ್ರಜ್ಞಾನ ಹೊಂದಿದ ಅಕಾಡೆಮಿ ಎನ್ನಲಾಗುತ್ತಿದೆ.
ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಂತಹ ಕಠಿಣ ಲೀಡರ್ ಶಿಪ್ ನಲ್ಲಿ ಕೆಲಸ ಮಾಡುವುದೆಂದರೆ ಕಷ್ಠ ಸಾಧ್ಯವೇ ಸರಿ. ಆದರೆ, 1500 ಕೋಟಿ ರೂ. ಮೊತ್ತದ ಯೋಜನೆಯನ್ನು ನಾರಾಯಣಸ್ವಾಮಿ ಅವರಿಗೆ ವಹಿಸಿದ್ದು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ನಾರಾಯಣಸ್ವಾಮಿ ಅವರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯದಲ್ಲಿ ಹುಟ್ಟಿ ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ನಂತರ ಗುಂಡ್ಲುಪೇಟೆಯ ಡಿಬಿಜಿಜೆ ಕಾಲೇಜು ಮತ್ತು ನಂಜನಗೂಡಿನ ಜೆಎಸ್ಎಸ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಮೈಸೂರಿನಲ್ಲಿ ಉನ್ನತ ವ್ಯಾಸಂಗ ಪಡೆದು, 1992 ರಲ್ಲಿ ಐಆರ್ ಎಸ್ ಅಧಿಕಾರಿಯಾಗಿ ಆಯ್ಕೆಗೊಂಡವರು.
ಚಾಮರಾಜನಗರ ಜಿಲ್ಲೆಯ ಹಿಂದುಳಿದ ಗ್ರಾಮದಲ್ಲಿ ಜನಿಸಿದ ನಾರಾಯಣಸ್ವಾಮಿ ಅವರು, ಇಡೀ ಭಾರತವೇ ಒಮ್ಮೆ ತಿರುಗಿ ನೋಡುವಂಥ ನಾಸಿನ್ ಅಕಾಡೆಮಿ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.