ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಮುಖ್ಯ ವೀಕ್ಷಕಿಯಾಗಿರುವ ಎಸ್.ಎಂ. ಉಮಾ ಅವರು ವೃತ್ತಿ, ಸಂಸಾರ ನಿರ್ವಹಣೆಯ ಜೊತೆ ಜೊತೆಗೆ ಕ್ರೀಡೆಯಲ್ಲಿಯೂ ಸಾಧನೆ ಮಾಡುತ್ತಿದ್ದಾರೆ.ಇವರು ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸೂರಾಪುರದವರು. ಕೃಷಿ ಕುಟುಂಬ. ತಂದೆ ರೈತರು, ತಾಯಿ ಹೊಲಿಗೆ ಕೆಲಸ ಮಾಡುತ್ತಾರೆ. ಈ ದಂಪತಿಗೆ ಮೂವರು ಪುತ್ರಿಯರು. ಉಮಾ ಮೊದಲನೆಯವರು. 2005 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಗಳಿಸಿದ ಉಮಾ 2008 ರಲ್ಲಿ ಕಾರಾಗೃಹ ಇಲಾಖೆಯ ವೀಕ್ಷಕಿಯಾಗಿ ನೇಮಕಗೊಂಡರು. 2019 ರಲ್ಲಿ ಇವರಿಗೆ ಮುಖ್ಯ ವೀಕ್ಷಕಿಯಾಗಿ ಬಡ್ತಿ ದೊರೆತಿದೆ.ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಉಮಾ ಅವರಿಗೆ ಸಮವಸ್ತ್ರ ಧರಿಸುವ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂಬ ಕನಸು. ಅದನ್ನು ನನಸು ಮಾಡಿಕೊಂಡ ಅವರು ಸಂಸಾರ, ಕರ್ತವ್ಯ ನಿರ್ವಹಣೆಯ ಜೊತೆ ಜೊತೆಗೆ ಬಿಡುವಿನ ವೇಳೆಯಲ್ಲಿ ಕ್ರೀಡಾಭ್ಯಾಸ ನಡೆಸುತ್ತಿದ್ದಾರೆ. ಜಿಲ್ಲಾ,, ರಾಜ್ಯ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವಾರು ವಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. 2023-24 ರಲ್ಲಿ ಭೂತಾನ್‌ನಲ್ಲಿ ನಡೆದ 5 ಕಿ.ಮೀ. ಓಟ ಹಾಗೂ 5 ಕಿ.ಮೀ ನಡಿಗೆಯಲ್ಲಿ ತಲಾ ಒಂದೊಂದು ಚಿನ್ನದ ಪದಕ ಪಡೆದಿದ್ದಾರೆ. 2024 ರ ಜೂನ್‌ನಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ 5 ಕಿ.ಮೀ ಓಟ, 5 ಕಿ.ಮೀ. ನಡಿಗೆ ಹಾಗೂ 1500 ಮೀ. ಓಟದಲ್ಲಿ ತಲಾ ಒಂದೊಂದು ಬೆಳ್ಳಿಯ ಪದಕ ಗಳಿಸಿದ್ದಾರೆ.2025ಕ ಫೆಬ್ರವರಿಯಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ 5 ಕಿ.ಮೀ. ನಡಿಗೆ, 1500 ಮೀ. ಓಟ ಹಾಗೂ 4/400 ರಿಲೇಯಲ್ಲಿ ತಲಾ ಒಂದೊಂದು ಚಿನ್ನದ ಪದಕ, 5 ಕಿ.ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಲ್ಲಿ 90ಕ್ಕೂ ಅಧಿಕ ಪದಕಗಳನ್ನು ಪಡೆದಿದ್ದಾರೆ. ಇವುಗಳಲ್ಲಿ ಹಲವು ಸರ್ಕಾರಿ ನೌಕರರ ಕ್ರೀಡಾಕೂಟ, ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಪಡೆದವು.