ಬಾಲವನದಲ್ಲಿನ ತೆರೆದ ರಂಗಮಂದಿರ ಅಭಿವೃದ್ಧಿಗೆ ಆದ್ಯತೆ: ಜುಬಿನ್ ಮೊಹಾಪಾತ್ರ

KannadaprabhaNewsNetwork | Published : Feb 15, 2024 1:34 AM

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವೆಬ್‌ಸೈಟ್ ಮೊಬೈಲ್ ಆವೃತ್ತಿ ತಯಾರಿಸಿದ ಪ್ರಮೀತ್‌ರಾಜ್ ಕಟ್ಟತ್ತಾರು ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಬಾಲವನದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಇಲ್ಲಿ ಮಕ್ಕಳ ಪ್ರತಿಭೆಗಳ ಬೆಳವಣಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಬಾಲವನದ ತೆರೆದ ರಂಗಮಂದಿರವನ್ನು ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ನಂತರದ ದಿನಗಳಲ್ಲಿ ವರಾಂತ್ಯಕ್ಕೆ ವಿವಿಧ ಸ್ಪರ್ಧೆಗಳನ್ನು ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ. ಅವರು ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತರ ಬಾಲವನದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪುತ್ತೂರು ತಾಲೂಕು ಘಟಕ ಮತ್ತು ಬಾಲವನ ಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ೭೩ನೇ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮತ್ತು ಕಸಾಪ ತಾಲೂಕು ಘಟಕದ ವೆಬ್‌ಸೈಟ್ ಮೊಬೈಲ್ ಆವೃತ್ತಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಮಾತನಾಡಿ ಸಾಹಿತ್ಯ ಪರಿಷತ್ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವುದು ಮಾತ್ರವಲ್ಲದೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕೆಲಸ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವೆಬ್‌ಸೈಟ್ ಮೊಬೈಲ್ ಆವೃತ್ತಿ ತಯಾರಿಸಿದ ಪ್ರಮೀತ್‌ರಾಜ್ ಕಟ್ಟತ್ತಾರು ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಪುರಂದರ, ನಗರಸಭೆಯ ಸದಸ್ಯೆ ದೀಕ್ಷಾ ಪೈ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕೋಶಾಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಸುದ್ದಿ ಸಮೂಹ ಸಂಸ್ಥೆಗಳ ಸಂಚಾಲಕ ಡಾ.ಯು.ಪಿ. ಶಿವಾನಂದ, ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್, ಅಮೃತಕಲಾ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಶಂಕರಿ ಶರ್ಮ ವಂದಿಸಿದರು.

Share this article